ಮೇಲ್ಮನೆ ಚುನಾವಣೆ: ಶಶೀಲ್ ನಮೋಶಿ ಮುನ್ನಡೆ, ಎರಡನೇ ಸುತ್ತಿನ ಎಣಿಕೆ ಆರಂಭ
ಸಂ.ಕ. ಸಮಾಚಾರ ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆಯಲ್ಲಿ ಮೊದಲ ಸುತ್ತಿನ ಅಂತ್ಯಕ್ಕೆ ಎನ್ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಮುನ್ನಡೆ ಸಾಧಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ನಡೆದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ನಮೋಶಿ 6,726 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ 5,297 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ನಮೋಶಿ ಅವರು 1,529 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಲಭ್ಯವಾದ ಪ್ರಾಥಮಿಕ ಮಾಹಿತಿ ತಿಳಿಸಿದೆ.
ಮೊದಲ ಸುತ್ತಿನಲ್ಲಿ ಸುಮಾರು 14 ಸಾವಿರ ಮತಗಳ ಎಣಿಕೆ ಪೂರ್ಣಗೊಂಡಿದೆ ಎಂದು ತಿಳಿದುಬಂದಿದ್ದು, ಈ ಅಂಕಿಅಂಶಗಳು ಚುನಾವಣಾಧಿಕಾರಿಗಳಿಂದ ಅಧಿಕೃತವಾಗಿ ದೃಢೀಕರಣಗೊಳ್ಳಬೇಕಿದೆ. ಮೊದಲ ಸುತ್ತಿನ ಎಣಿಕೆ ಮುಕ್ತಾಯಗೊಂಡ ಬೆನ್ನಲ್ಲೇ ಎರಡನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ. ಒಟ್ಟು 144 ಮತಪೆಟ್ಟಿಗೆಗಳ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.
ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ನಡುವೆ ಪ್ರಮುಖ ಸ್ಪರ್ಧೆ ಇದೆ. ಆಮ್ ಆದ್ಮಿ ಪಕ್ಷದಿಂದ ಸೈಬಣ್ಣ ಜಮಾದಾರ, ಜನತಾ ದಳ (ಯುನೈಟೆಡ್) ಪಕ್ಷದಿಂದ ಪ್ರೊ. ಎಸ್.ಎಲ್. ಪಾಟೀಲ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಳಿದ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.
ಅಕ್ಟೋಬರ್ 23ರಂದು ನಡೆದ ಮತದಾನದಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರವು ಶೇ. 86.97ರಷ್ಟು ಮತದಾನ ದಾಖಲಿಸಿತ್ತು. ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಒಳಗೊಂಡಿರುವ ಈ ಕ್ಷೇತ್ರದ ಫಲಿತಾಂಶದ ಬಗ್ಗೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಕುತೂಹಲದಿಂದ ಕಾಯುತ್ತಿವೆ.
- ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: 2ನೇ ಸುತ್ತಿನಲ್ಲೂ ಸಂಕನೂರ ಮುನ್ನಡೆ
- ಷೇರು ಮಾರುಕಟ್ಟೆಗೆ ಎಂಟ್ರಿ ಕೊಡ್ತಿದ್ದಂತೆ ಜಿಯೋಗೆ ಬಂಪರ್! 2ನೇ ಸ್ಥಾನಕ್ಕೇರುವ ಸಾಧ್ಯತೆ
- ಕರ್ನಾಟಕದ ಮತದಾರರ ಪಟ್ಟಿಯಿಂದ 99.32 ಲಕ್ಷ ಹೆಸರು ಡಿಲೀಟ್! ಅಂತಿಮ ಪಟ್ಟಿಯಲ್ಲಿ ಎಷ್ಟು ಮತದಾರರಿದ್ದಾರೆ?
- ಕಿರುತೆರೆ ಲೋಕಕ್ಕೆ ಆಘಾತ: ́CID’, ‘ಆಹಟ್’ ಸೃಷ್ಟಿಕರ್ತ B.P ಸಿಂಗ್ ನಿಧನ
- ದರ್ಶನ್ ಅಕೌಂಟ್ನಿಂದ ನಾನೇ ಬ್ಲಾಕ್ ಆಗಿದ್ದೇನೆ: ವದಂತಿಗಳಿಗೆ ನಟ ಧನ್ವೀರ್ ಭಾವುಕ ಸ್ಪಷ್ಟನೆ!




















