ಕೊಪ್ಪಳ: ಕೆಲ ವ್ಯಕ್ತಿಗಳ ದುರುದ್ದೇಶ ಹಾಗೂ ಸ್ವಾರ್ಥಕ್ಕಾಗಿ ನಡೆಯುವ ಸ್ಟಿಂಗ್ ಆಪರೇಷನ್ ಪ್ರಕರಣಗಳಲ್ಲಿ ಮಹಿಳೆಯರೇ ಬಲಿಪಶುಗಳಾಗುತ್ತಿದ್ದಾರೆ. ಇಂತಹ ಚಟುವಟಿಕೆಗಳಲ್ಲಿ ಮಹಿಳೆಯರನ್ನು ಬಳಸಿಕೊಂಡು ತಮ್ಮ ಕೆಲಸ ಸಾಧಿಸಿಕೊಂಡ ಬಳಿಕ ಅವರ ನೆರವಿಗೆ ಯಾರೂ ನಿಲ್ಲುವುದಿಲ್ಲ. ಹೀಗಾಗಿ ಮಹಿಳೆಯರು ಎಚ್ಚರಿಕೆಯಿಂದಿರಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.
ಕುಷ್ಟಗಿ ಪಟ್ಟಣಕ್ಕೆ ಭೇಟಿ ನೀಡಿದ್ದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣಗಳಲ್ಲಿ ಮಹಿಳೆಯರನ್ನೇ ಮುಂಚೂಣಿಯಲ್ಲಿ ಬಳಸಿಕೊಳ್ಳುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ಅನುಕೂಲ ಹಾಗೂ ಸ್ವಾರ್ಥಕ್ಕಾಗಿ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಮಹಿಳೆಯರನ್ನು ಬಳಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ಮಹಿಳೆಯರನ್ನು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ತಮ್ಮ ಉದ್ದೇಶ ಈಡೇರಿದ ಬಳಿಕ ಸಂಬಂಧಿಸಿದ ಮಹಿಳೆಯರ ಬೆಂಬಲಕ್ಕೆ ಯಾರೂ ಮುಂದೆ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಟಿಂಗ್ ಆಪರೇಷನ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರು ಎದುರಿಸಬೇಕಾದ ಸಾಮಾಜಿಕ ಹಾಗೂ ಕೌಟುಂಬಿಕ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಪ್ರಕರಣಗಳಿಂದ ಮಹಿಳೆಯರ ವೈಯಕ್ತಿಕ ಜೀವನದ ಮೇಲೆ ಮಾತ್ರವಲ್ಲದೆ, ಅವರ ಕುಟುಂಬದ ಸದಸ್ಯರು ಹಾಗೂ ಮಕ್ಕಳ ಭವಿಷ್ಯದ ಮೇಲೂ ದುಷ್ಪರಿಣಾಮ ಉಂಟಾಗಬಹುದು. ಸಮಾಜದಲ್ಲಿ ಮುಜುಗರ ಅನುಭವಿಸುವ ಪರಿಸ್ಥಿತಿಯೂ ಎದುರಾಗಬಹುದು ಎಂದರು.
ಹೀಗಾಗಿ ಮಹಿಳೆಯರು ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೊದಲು ಅದರ ಸಾಧಕ-ಬಾಧಕಗಳನ್ನು ಅರಿತುಕೊಳ್ಳಬೇಕು. ತಮ್ಮ ಕುಟುಂಬದ ಭವಿಷ್ಯ ಹಾಗೂ ವೈಯಕ್ತಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವಿಷಯದ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಮಹಿಳೆಯರನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಮಹಿಳಾ ಆಯೋಗದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದರು.





















