SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಹಿರಿಯ ನಾಗರಿಕರು ಸಮಾಜಕ್ಕೆ ಆಲದ ಮರದ ನೆರಳಿದ್ದಂತೆ: ನ್ಯಾಯಾಧೀಶೆ ತೇಜಸ್ವಿನಿ ಸೊಗಲದ

ಹಿರಿಯ ನಾಗರಿಕರು ಸಮಾಜಕ್ಕೆ ಆಲದ ಮರದ ನೆರಳಿದ್ದಂತೆ: ನ್ಯಾಯಾಧೀಶೆ ತೇಜಸ್ವಿನಿ ಸೊಗಲದ

0
156

ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ : ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ದಾಂಡೇಲಿ ನಗರಸಭೆ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಅವರು, “ಆಲದ ಮರ ಹೇಗೆ ಬೆಳೆಯುತ್ತಾ ತನ್ನ ವಿಶಾಲವಾದ ನೆರಳಿನಿಂದ ಎಲ್ಲರಿಗೂ ಆಶ್ರಯ ನೀಡುತ್ತದೆಯೋ, ಅದೇ ರೀತಿ ಹಿರಿಯ ನಾಗರಿಕರು ತಮ್ಮ ಅನುಭವ, ಜ್ಞಾನ ಮತ್ತು ಮಾರ್ಗದರ್ಶನದ ಮೂಲಕ ಸಮಾಜಕ್ಕೆ ನೆರಳಾಗಿ ನಿಲ್ಲಬೇಕು” ಎಂದು ಹೇಳಿದರು.

ಹಿರಿಯ ನಾಗರಿಕರು ಕುಟುಂಬ ಹಾಗೂ ಸಮಾಜದ ಅಮೂಲ್ಯ ಆಸ್ತಿಯಾಗಿದ್ದಾರೆ. ಅವರ ಜೀವನಾನುಭವಗಳು ಯುವ ಪೀಳಿಗೆಗೆ ದಾರಿದೀಪವಾಗಿದ್ದು, ಅವರ ಸಲಹೆ ಮತ್ತು ಮಾರ್ಗದರ್ಶನ ಸಮಾಜದ ಪ್ರಗತಿಗೆ ಸಹಕಾರಿಯಾಗುತ್ತದೆ. ಮನುಷ್ಯನು ನೋಡಿ, ಕೇಳಿ ಮತ್ತು ಅನುಭವದಿಂದ ಕಲಿಯುವ ಜೀವಿಯಾಗಿರುವುದರಿಂದ ಹಿರಿಯರ ಜೀವನದ ಮೌಲ್ಯಗಳು ಯುವಜನತೆಗೆ ಪ್ರೇರಣೆಯಾಗಬೇಕು ಎಂದು ಅವರು ತಿಳಿಸಿದರು.

ಹಿರಿಯ ನಾಗರಿಕರ ಹಕ್ಕುಗಳ ಕುರಿತು ಪ್ರಸ್ತಾಪಿಸಿದ ಅವರು, ಹಿರಿಯರಿಗೆ ಗೌರವಯುತವಾಗಿ ಬದುಕುವ ಹಕ್ಕು, ಆರೋಗ್ಯ ಸೇವೆ ಪಡೆಯುವ ಹಕ್ಕು, ಸಾಮಾಜಿಕ ಭದ್ರತೆ, ಆರ್ಥಿಕ ನೆರವು ಹಾಗೂ ಕುಟುಂಬದಿಂದ ಆರೈಕೆ ಮತ್ತು ರಕ್ಷಣೆ ಪಡೆಯುವ ಹಕ್ಕುಗಳಿವೆ ಎಂದು ತಿಳಿಸಿದರು. ಹಿರಿಯ ನಾಗರಿಕರ ಮೇಲೆ ದೌರ್ಜನ್ಯ, ನಿರ್ಲಕ್ಷ್ಯ ಅಥವಾ ಶೋಷಣೆ ನಡೆಯದಂತೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಅವರ ಹಕ್ಕುಗಳನ್ನು ಗೌರವಿಸುವುದರ ಜೊತೆಗೆ, ಅವರಿಗೆ ಪ್ರೀತಿ, ಕಾಳಜಿ ಮತ್ತು ಭದ್ರತೆಯನ್ನು ಒದಗಿಸುವುದು ಕುಟುಂಬದ ಸದಸ್ಯರು ಹಾಗೂ ಸಮಾಜದ ಕರ್ತವ್ಯವಾಗಿದೆ ಎಂದು ಹೇಳಿದರು.

ಹಿರಿಯ ನಾಗರಿಕರನ್ನು ಗೌರವಿಸುವುದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಅವರ ಅನುಭವ ಮತ್ತು ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಹಿರಿಯರು ಮತ್ತು ಯುವಜನರ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಮೂಲಕ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನಾಗರಿಕ ಸಮಿತಿ ಅಧ್ಯಕ್ಷ ಎಂ ಆರ್.ನಾಯಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಿವೈ ಎಸ್.ಪಿ. ಗಿರೀಶ, ಸಿ.ಪಿ.ಐ.ಶಿವಾನಂದ ಅಂಬಿಗೇರ, ಪೌರಾಯುಕ್ತ ವಿವೇಕ ಬನ್ನೆ, ಮತ್ತಿತರರು ಪಾಲ್ಗೊಂಡಿದ್ದರು.