ಬೆಳಗಾವಿ: ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, ₹1.70 ಲಕ್ಷ ಮೌಲ್ಯದ ಗಾಂಜಾ ಹಾಗೂ ಬೈಕ್ನ್ನು ಜಪ್ತಿ ಮಾಡಿದ್ದಾರೆ.
ಅ.12ರಂದು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ನಾಯಕ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅನಗೋಳ–ವಡಗಾವಿ ರಸ್ತೆಯ ಸಂತಮೀರಾ ಶಾಲೆ ಸಮೀಪ, ಭಾಗ್ಯನಗರದ ಐದನೇ ಕ್ರಾಸ್ ಎದುರು ದಾಳಿ ನಡೆಸಲಾಯಿತು. ಈ ವೇಳೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ತಿಲಕವಾಡಿಯ ಶಿವಾಜಿ ಕಾಲನಿ ನಿವಾಸಿ ಕೃಷ್ಣಾ ಗಜಾನನ ಪಾಟೀಲ (24) ಹಾಗೂ ಶಹಾಪುರದ ನವಿಗಲ್ಲಿಯ ರೂಪೇಶ ಸುಧೀರ ಶಿಂದೆ (26) ಅವರನ್ನು ಬಂಧಿಸಲಾಯಿತು.
ಆರೋಪಿತರಿಂದ ₹70 ಸಾವಿರ ಮೌಲ್ಯದ 1.345 ಕೆ.ಜಿ. ಗಾಂಜಾ ಹಾಗೂ ₹1 ಲಕ್ಷ ಮೌಲ್ಯದ ಬಜಾಜ್ ಪಲ್ಸರ್ ಎನ್ಎಸ್-125 ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾವನ್ನು ಖಾನಾಪುರದ ವ್ಯಕ್ತಿಯೊಬ್ಬನಿಂದ ತಂದಿರುವುದಾಗಿ ಆರೋಪಿಗಳು ತಿಳಿಸಿದ್ದು, ಆತನ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಸಂಬಂಧ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಳಿ ನಡೆಸಿದ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಶ್ಲಾಘಿಸಿದ್ದಾರೆ.






















