SK Home Ad
Home ಕ್ರೀಡೆ ‘ಇದು ಒಂಥರಾ ತಮಾಷೆ ಅನ್ನಿಸ್ತಿದೆ’: ಯಶಸ್ವಿ ಜೈಸ್ವಾಲ್ ಹೊಸ ಅವತಾರ ನೋಡಿ ರೊಚ್ಚಿಗೆದ್ದ ಮುಂಬೈ ದಿಗ್ಗಜ!

‘ಇದು ಒಂಥರಾ ತಮಾಷೆ ಅನ್ನಿಸ್ತಿದೆ’: ಯಶಸ್ವಿ ಜೈಸ್ವಾಲ್ ಹೊಸ ಅವತಾರ ನೋಡಿ ರೊಚ್ಚಿಗೆದ್ದ ಮುಂಬೈ ದಿಗ್ಗಜ!

0
22

ಟೀಮ್ ಇಂಡಿಯಾದ ಸ್ಟಾರ್ ಟೆಸ್ಟ್ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ದಿಢೀರನೇ ಗ್ಲೌಸ್ ತೊಟ್ಟು ವಿಕೆಟ್ಕೀಪಿಂಗ್ ಅಭ್ಯಾಸ ಆರಂಭಿಸಿರುವುದು ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ತಮ್ಮ 24ನೇ ವಯಸ್ಸಿನಲ್ಲಿ ಜೈಸ್ವಾಲ್ ತೆಗೆದುಕೊಂಡಿರುವ ಈ ಅನಿರೀಕ್ಷಿತ ನಿರ್ಧಾರವನ್ನು ಭಾರತದ ಮಾಜಿ ಆರಂಭಿಕ ಹಾಗೂ ದೇಶಿ ಕ್ರಿಕೆಟ್ ದಿಗ್ಗಜ ವಾಸಿಂ ಜಾಫರ್ ಕಟುವಾಗಿ ಟೀಕಿಸಿದ್ದು, “ಇದು ಶುದ್ಧ ತಮಾಷೆಯಂತೆ ಕಾಣುತ್ತಿದೆ” ಎಂದು ನೇರವಾಗಿಯೇ ಕಿಡಿಕಾರಿದ್ದಾರೆ.

2026-27ರ ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಮುಂಬೈ ತಂಡದ ನಾಯಕ ಸಿದ್ದೇಶ್ ಲಾಡ್ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಜೈಸ್ವಾಲ್ ಬ್ಯಾಟಿಂಗ್ ಮತ್ತು ಲೆಗ್-ಸ್ಪಿನ್ ಜೊತೆಗೆ ಬ್ಯಾಕ್-ಅಪ್ ಕೌಶಲ್ಯವಾಗಿ ವಿಕೆಟ್ಕೀಪಿಂಗ್ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಚಂಡೀಗಢ ವಿರುದ್ಧದ ರಣಜಿ ಆರಂಭಿಕ ಪಂದ್ಯಕ್ಕೂ ಮುನ್ನ ಜೈಸ್ವಾಲ್ ಸುಮಾರು 10 ಓವರ್ ಕೀಪಿಂಗ್ ಅಭ್ಯಾಸ ನಡೆಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಾಫರ್, “ನನಗೆ ಈ ಸುದ್ದಿ ಕೇಳಿ ನಿಜಕ್ಕೂ ಆಶ್ಚರ್ಯವಾಯಿತು. ಬಾಲ್ಯದಿಂದಲೇ ಕೀಪಿಂಗ್ ಮಾಡದಿದ್ದರೆ ಈ ವಯಸ್ಸಿನಲ್ಲಿ ಆ ಕೌಶಲ್ಯ ಬೆಳೆಸಿಕೊಳ್ಳುವುದು ಸುಲಭವಲ್ಲ. ವಿಕೆಟ್ಕೀಪಿಂಗ್ ಎಂಬುದು ಅಪಾರ ದೈಹಿಕ ಶ್ರಮ ಬೇಡುವ ಕಠಿಣ ಕೆಲಸ.

ಭಾರತ ತಂಡದಲ್ಲಿ ಈಗಾಗಲೇ ರಿಷಭ್ ಪಂತ್, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಂತಹ ಸ್ಪೆಷಲಿಸ್ಟ್ಗಳಿದ್ದಾರೆ. ಹೀಗಿರುವಾಗ ಜೈಸ್ವಾಲ್ ಕೀಪಿಂಗ್ ಮಾಡಿದರೂ ಅವರಿಗೆ ಅವಕಾಶ ಎಲ್ಲಿ ಸಿಗುತ್ತದೆ? ವೈಟ್ಬಾಲ್ ತಂಡದಲ್ಲಿ ಸ್ಥಾನ ಪಡೆಯಲು ಅವರು ತೀರಾ ಹತಾಶರಾಗಿರುವಂತೆ ಕಾಣುತ್ತಿದೆ” ಎಂದು ಚಾಟಿ ಬೀಸಿದ್ದಾರೆ.

ಮುಂಬರುವ ನ್ಯೂಜಿಲೆಂಡ್ ಪ್ರವಾಸ ಹಾಗೂ ಟೆಸ್ಟ್ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಜೈಸ್ವಾಲ್ ತಮ್ಮ ಮೂಲ ಸಾಮರ್ಥ್ಯವಾದ ಬ್ಯಾಟಿಂಗ್ ಮೇಲಷ್ಟೇ ಪೂರ್ಣ ಗಮನಹರಿಸಬೇಕು ಎಂದು ಜಾಫರ್ ಕಿವಿಮಾತು ಹೇಳಿದ್ದಾರೆ. ಅನಗತ್ಯ ಪ್ರಯೋಗಗಳಿಗೆ ಕೈಹಾಕಿ ತಮ್ಮ ನೈಜ ಫಾರ್ಮ್ ಹಾಳುಮಾಡಿಕೊಳ್ಳದಂತೆ ಎಚ್ಚರಿಸಿದ್ದಾರೆ.