SK Home Ad
Home ಸಿನಿ ಮಿಲ್ಸ್ ಕನ್ನಡಿಗರ ಹೃದಯ ಗೆದ್ದ ರೆಬೆಲ್‌ ಸ್ಟಾರ್‌ಗೆ ಕರ್ನಾಟಕದ ಅತ್ಯುನ್ನತ ಗೌರವಕ್ಕೆ ಆಗ್ರಹ

ಕನ್ನಡಿಗರ ಹೃದಯ ಗೆದ್ದ ರೆಬೆಲ್‌ ಸ್ಟಾರ್‌ಗೆ ಕರ್ನಾಟಕದ ಅತ್ಯುನ್ನತ ಗೌರವಕ್ಕೆ ಆಗ್ರಹ

0
29

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ರಾಜಕಾರಣಿ ಅಂಬರೀಶ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ನೀಡುವಂತೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಅಂಬರೀಶ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ ‘ರೆಬೆಲ್ ಸ್ಟಾರ್’ ಆಗಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಚಿತ್ರರಂಗದ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಮತ್ತು ಕಲಾವಿದರ ಹಿತ ಕಾಯುವಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿದ್ದರು. ರಾಜಕೀಯ ರಂಗದಲ್ಲೂ ಶಾಸಕರಾಗಿ, ಸಂಸದರಾಗಿ, ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ನಾಡಿನ ಅಭಿವೃದ್ಧಿಗೆ, ವಿಶೇಷವಾಗಿ ಮಂಡ್ಯ ಹಾಗೂ ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗೆ ಸದಾ ಶ್ರಮಿಸಿದ್ದಾರೆ.

ಅವರ ಕೊಡುಗೆ, ಜನಪ್ರಿಯತೆ ಹಾಗೂ ನಾಡಿನ ಮೇಲಿನ ಪ್ರೀತಿಯನ್ನು ಗೌರವಿಸಿ, ಅವರಿಗೆ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʻಕರ್ನಾಟಕ ರತ್ನ’ವನ್ನು (ಮರಣೋತ್ತರವಾಗಿ) ನೀಡಿ ಗೌರವಿಸುವುದು ಅತ್ಯಂತ ಸೂಕ್ತವಾಗಿದೆ ಎಂಬುದು ನನ್ನ ಹಾಗೂ ನಾಡಿನ ಸಮಸ್ತ ಜನತೆಯ ತೀವ್ರ ಆಶಯವಾಗಿದೆ.

ಈ ವಿಷಯವಾಗಿ ಅಖಿಲ ಕರ್ನಾಟಕ ನ್ಯಾಯ ನೀತಿ ಧರ್ಮ ಡಾ. ಅಂಬರೀಶ್ ಅಭಿಮಾನಿಗಳ ಸಂಘದವರು ನನಗೆ ಸಲ್ಲಿಸಿರುವ ಸ್ವಯಂವೇದ್ಯ ಮನವಿಯನ್ನು ಇದರೊಂದಿಗೆ ಲಗತ್ತಿಸಿದೆ. ಆದ್ದರಿಂದ, ಮುಂಬರುವ ರಾಜ್ಯೋತ್ಸವ ಅಥವಾ ಸೂಕ್ತ ಸಂದರ್ಭದಲ್ಲಿ ಎಂ. ಹೆಚ್. ಅಂಬರೀಶ್ ಅವರಿಗೆ ಮರಣೋತ್ತರವಾಗಿ ʻಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಿಸಿ ಗೌರವಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಕೋರಿದ್ದಾರೆ.