ಕೊಪ್ಪಳ: ಜಮೀನಿನಲ್ಲಿ ಅಳವಡಿಸಿರುವ ವಿದ್ಯುತ್ ಕಂಬಕ್ಕೆ ನಿಯಮಾನುಸಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಹಿರೇನಂದಿಹಾಳ ಗ್ರಾಮದ ರೈತ ಹನುಮಂತಪ್ಪ ಷಣ್ಮುಖಪ್ಪ ಬಾರಿಗಿಡ ವಿದ್ಯುತ್ ಕಂಬ ಏರಿ ಪ್ರತಿಭಟನೆ ನಡೆಸಿದರು.
ಹನುಮಂತಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಸಿ ವಿದ್ಯುತ್ ಮಾರ್ಗ ನಿರ್ಮಿಸಲಾಗಿದ್ದು, ಇದರಿಂದ ಜಮೀನಿನ ಬಳಕೆಗೆ ತೊಂದರೆಯಾಗುತ್ತಿದೆ. ಕಂಬ ಅಳವಡಿಸಿರುವುದಕ್ಕೆ ಪರಿಹಾರ ನೀಡುವಂತೆ ಹಲವು ಬಾರಿ ವಿದ್ಯುತ್ ಇಲಾಖೆಯ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ದೊರೆತಿಲ್ಲ ಎಂದು ಅವರು ಆರೋಪಿಸಿದರು.
ವಿದ್ಯುತ್ ಕಾಮಗಾರಿ ಕೈಗೊಳ್ಳಲು ಸಿಬ್ಬಂದಿ ಸ್ಥಳಕ್ಕೆ ಬಂದಾಗ ಹನುಮಂತಪ್ಪ ಕಾಮಗಾರಿಗೆ ತಡೆ ಒಡ್ಡಿದರು. ಪರಿಹಾರ ನೀಡದೆ ಕಾಮಗಾರಿ ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕಂಬ ಏರಿ ಕುಳಿತರು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕೆ ವಹಿಸಿದರು. ಠಾಣಾಧಿಕಾರಿ ಮಾಳಿಂಗರಾಯ ಹಾಗೂ ಸಿಬ್ಬಂದಿ ರೈತನೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದ ಬಳಿಕ ಹನುಮಂತಪ್ಪ ಸುರಕ್ಷಿತವಾಗಿ ಕೆಳಗಿಳಿದರು. ಬಳಿಕ ಅಧಿಕಾರಿಗಳು ರೈತನ ಅಹವಾಲು ಆಲಿಸಿ, ಜಮೀನಿನ ದಾಖಲೆಗಳು ಹಾಗೂ ವಿದ್ಯುತ್ ಕಂಬದ ಕುರಿತು ಪರಿಶೀಲಿಸಿ ನಿಯಮಾನುಸಾರ ಪರಿಹಾರ ಒದಗಿಸುವ ಭರವಸೆ ನೀಡಿದರು.






















