ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ಈ ಬಾರಿ ಭಾರತೀಯ ವಾಯುಪಡೆಯ ಸಾಹಸಮಯ ವೈಮಾನಿಕ ಕಸರತ್ತು ಮತ್ತಷ್ಟು ಮೆರುಗು ನೀಡಲಿದೆ. ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ‘ಸೂರ್ಯ ಕಿರಣ್ ಏರೋಬ್ಯಾಟಿಕ್’ (Surya Kiran Aerobatic) ತಂಡದ ಪ್ರದರ್ಶನ ನಡೆಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 6ರಂದು ಕೇಂದ್ರ ರಕ್ಷಣಾ ಸಚಿವರಿಗೆ ಪತ್ರ ಬರೆದು, ದಸರಾ ವೇಳೆ ವಾಯುಪಡೆಯ ಸೂರ್ಯ ಕಿರಣ್ ಹಾಗೂ ಸಾರಂಗ್ ಹೆಲಿಕಾಪ್ಟರ್ ತಂಡಗಳ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಕೋರಿದ್ದರು. ಈ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ, ಸೂರ್ಯ ಕಿರಣ್ ತಂಡದ ವೈಮಾನಿಕ ಶೋಗೆ ಅಧಿಕೃತ ಅನುಮತಿ ನೀಡಿದೆ.
ಅಕ್ಟೋಬರ್ 18 ರಿಂದ 20ರ ವರೆಗೆ ಮೂರು ದಿನಗಳ ಕಾಲ ಈ ವಿಶೇಷ ಪ್ರದರ್ಶನ ನಡೆಯಲಿದ್ದು, ಮೈಸೂರಿನ ನಭೋಮಂಡಲದಲ್ಲಿ ಯುದ್ಧ ವಿಮಾನಗಳು ನಡೆಸಲಿರುವ ರೋಮಾಂಚನಕಾರಿ ರೋಮಾಂಚಕ ಕಸರತ್ತುಗಳನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು. ಪ್ರದರ್ಶನಕ್ಕೆ ಅಗತ್ಯವಿರುವ ಸಿದ್ಧತೆ ಹಾಗೂ ಸಮನ್ವಯ ಕಾರ್ಯಗಳನ್ನು ವಾಯುಪಡೆಯೊಂದಿಗೆ ಚರ್ಚಿಸಿ ಕೈಗೊಳ್ಳುವಂತೆ ರಕ್ಷಣಾ ಸಚಿವಾಲಯ ಸೂಚನೆ ನೀಡಿದೆ.
ಆದ್ರೆ ಪೂರ್ವನಿಗದಿತ ಕಾರ್ಯಕ್ರಮಗಳ ಕಾರಣದಿಂದಾಗಿ ಈ ಬಾರಿ ‘ಸಾರಂಗ್ ಹೆಲಿಕಾಪ್ಟರ್ ಏರೋಬ್ಯಾಟಿಕ್’ ತಂಡದ ಪ್ರದರ್ಶನ ಮೈಸೂರಿನಲ್ಲಿ ಲಭ್ಯವಿರುವುದಿಲ್ಲ ಎಂದು ರಕ್ಷಣಾ ಸಚಿವರು ಸ್ಪಷ್ಟಪಡಿಸಿದ್ದಾರೆ. ಆದ್ರೂ ಸೂರ್ಯ ಕಿರಣ್ ವಿಮಾನಗಳ ಶಕ್ತಿ ಪ್ರದರ್ಶನವು ಸಾಂಸ್ಕೃತಿಕ ನಗರಿಗೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರಿಗೆ ಅತ್ಯಂತ ಜನಾಕರ್ಷಕ ಅನುಭವ ನೀಡಲಿದೆ.






















