SK Home Ad
Home ಸಿನಿ ಮಿಲ್ಸ್ ದಾವಣಗೆರೆಯಲ್ಲಿ ‘ಬೇಲ್’ ಚಿತ್ರತಂಡಕ್ಕೆ ಅದ್ಧೂರಿ ಸ್ವಾಗತ

ದಾವಣಗೆರೆಯಲ್ಲಿ ‘ಬೇಲ್’ ಚಿತ್ರತಂಡಕ್ಕೆ ಅದ್ಧೂರಿ ಸ್ವಾಗತ

0
100

ದಾವಣಗೆರೆ: ‘ಬೇಲ್’ ಚಲನಚಿತ್ರದ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ್ದ ನಟ ಡಾ. ಶಿವರಾಜ್‌ಕುಮಾರ್ ಹಾಗೂ ಚಿತ್ರತಂಡಕ್ಕೆ ಅಭಿಮಾನಿಗಳು ಮತ್ತು ಸಾರ್ವಜನಿಕರು ಅದ್ಧೂರಿ ಸ್ವಾಗತ ಕೋರಿದರು. ಚಿತ್ರತಂಡದ ಆಗಮನದಿಂದ ಥಿಯೇಟರ್ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್, ತಮ್ಮ ಮೊದಲ ಚಿತ್ರದಿಂದ ಇಂದಿನವರೆಗೂ ದಾವಣಗೆರೆಯ ಜನತೆ ನೀಡುತ್ತಿರುವ ಪ್ರೀತಿ, ಅಭಿಮಾನ ಮತ್ತು ಆಶೀರ್ವಾದಕ್ಕೆ ಕೃತಜ್ಞತೆ ಸಲ್ಲಿಸಿದರು.

‘ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಮುಖದಲ್ಲಿ ಕಾಣುತ್ತಿರುವ ಸಂತೋಷ ಹಾಗೂ ಮೆಚ್ಚುಗೆ ನೋಡಿ ಖುಷಿಯಾಗುತ್ತಿದೆ. ಚಿತ್ರಕ್ಕಾಗಿ ಪಟ್ಟ ಶ್ರಮ ಹಾಗೂ ಹೆಣೆದ ಕಥೆಗೆ ಸಾರ್ಥಕತೆ ಸಿಕ್ಕಂತಾಗಿದೆ. ‘ಬೇಲ್’ ಚಿತ್ರದಲ್ಲಿ ಭರಪೂರ ಮನರಂಜನೆಯಿದ್ದು, ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಅಪ್ಪಾಜಿ ಕಾಲದಿಂದಲೂ ಕನ್ನಡ ಸಿನಿಮಾಗಳಿಗೆ ದಾವಣಗೆರೆ ಜನತೆ ಬಹಳ ಅದ್ಧೂರಿಯಾಗಿ ಸ್ವಾಗತಿಸಿ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ನನ್ನ ನಟನೆಯ ಮೈಲಾರಿ, ಕರಟಕ ದಮನಕ ಸೇರಿದಂತೆ ಇತರೆ ಸಿನಿಮಾಗಳು ಯಶಸ್ವಿಯಾಗಿ ನಡೆದಿವೆ. ಆರಂಭದಲ್ಲಿ ಈ ಸಿನಿಮಾ ಬಗ್ಗೆ ಆತಂಕ ಇತ್ತು. ಈಗ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.

ತಾವು ಈಗಾಗಲೇ 131 ಚಿತ್ರಗಳನ್ನು ಪೂರ್ಣಗೊಳಿಸಿದ್ದು, ಕಥೆಯಲ್ಲಿ ಕಾಲ್ಪನಿಕ ಅಂಶಗಳೊಂದಿಗೆ ಸಮಾಜಕ್ಕೆ ಅಗತ್ಯವಿರುವ ನೈಜ ಸಂಗತಿಗಳ ನಡುವೆ ಸಮತೋಲನ ಇರಬೇಕು. ಸಮಾಜದಲ್ಲಿ ಕಾನೂನು ಮತ್ತು ವ್ಯವಸ್ಥೆ ಸರಿಯಾಗಿರಬೇಕು ಎಂಬುದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಆಶಯವಾಗಿದೆ ಎಂದು ಶಿವರಾಜ್‌ಕುಮಾರ್ ತಿಳಿಸಿದರು.

‘ಬೇಲ್’ ಸಂಪೂರ್ಣ ಕುಟುಂಬ ಸಮೇತರಾಗಿ ವೀಕ್ಷಿಸಬಹುದಾದ ಕೌಟುಂಬಿಕ ಮನರಂಜನಾ ಚಿತ್ರವಾಗಿದೆ. ಹಿರಿಯ ನಟರಾದ ಸಾಯಿಕುಮಾರ್, ಜಯರಾಮ್, ರಮೇಶ್ ಭಟ್ ಹಾಗೂ ಯುವ ನಟ-ನಟಿಯರಾದ ದೀಕ್ಷಿತ್ ಶೆಟ್ಟಿ, ಸಂಚನಾ ಆನಂದ್, ರಮೇಶ್ ಇಂದಿರಾ, ಗೋಪಾಲ್‌ಕೃಷ್ಣ ದೇಶಪಾಂಡೆ, ಕಿರಣ್‌ಶ್ರೀನಿವಾಸ್ ಸೇರಿದಂತೆ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕುಟುಂಬದ ಮಹತ್ವ, ಪ್ರೀತಿ ಮತ್ತು ಬಾಂಧವ್ಯದ ಸಂದೇಶದ ಜತೆಗೆ ಹಾಸ್ಯ ಹಾಗೂ ಮನರಂಜನೆಗೆ ಚಿತ್ರದಲ್ಲಿ ಆದ್ಯತೆ ನೀಡಲಾಗಿದೆ ಎಂದರು.

ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಕಥೆ ಹಾಗೂ ಪಾತ್ರವರ್ಗದ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಎಲ್ಲ ವಯೋಮಾನದವರು ಕುಟುಂಬ ಸಮೇತರಾಗಿ ವೀಕ್ಷಿಸಬಹುದಾದ ಚಿತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳು ಉತ್ತಮ ರೀತಿಯಲ್ಲಿ ಆರಂಭವಾಗುತ್ತಿರುವುದು ಸಂತಸದ ಸಂಗತಿ. ಆದರೆ ಇಂತಹ ಸಿನಿಮಾಗಳು ಸುದೀರ್ಘವಾಗಿ ಪ್ರದರ್ಶನ ಕಾಣಲು ಪ್ರೇಕ್ಷಕರ ಪ್ರೋತ್ಸಾಹ ಅತ್ಯಗತ್ಯ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ಹೊಸಬರ ಸಿನಿಮಾಗಳನ್ನು ವೀಕ್ಷಿಸಿ ಬೆಂಬಲಿಸಿದಾಗ ಮಾತ್ರ ಹೊಸ ತಂತ್ರಜ್ಞರು, ಹೊಸ ಕಥೆಗಳು ಹಾಗೂ ವಿಭಿನ್ನ ಪ್ರಯತ್ನಗಳು ಚಿತ್ರರಂಗಕ್ಕೆ ಬರಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಪವನ್ ಒಡೆಯರ್, ನಟ ದೀಕ್ಷಿತ್ ಶೆಟ್ಟಿ ಸೇರಿದಂತೆ ಇನ್ನಿತರರಿದ್ದರು. ಈ ವೇಳೆ ನೂರಾರು ಅಭಿಮಾನಿಗಳು ಶಿವರಾಜ್‌ಕುಮಾರ್ ಅವರಿಗೆ ಜಯಘೋಷ ಕೂಗಿ, ಜೈಕಾರ ಹಾಕಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.