ಬೆಳಗಾವಿ: ಪತಿಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಹಿಳೆ ಹಾಗೂ ಆಕೆಯ ಪ್ರೇಮಿ ಪರಸ್ಪರ ಮದುವೆಯಾಗಲು ಹೈಕೋರ್ಟ್ ಒಂದು ದಿನದ ಸೀಮಿತ ಪೆರೋಲ್ ಮಂಜೂರು ಮಾಡಿದೆ. ‘ಶಾಸನಬದ್ಧ ನಿಷೇಧವಿಲ್ಲದಿರುವಾಗ ಕೇವಲ ನೈತಿಕತೆಯ ಆಧಾರದಲ್ಲಿ ಕಾನೂನುಬದ್ಧ ಹಕ್ಕನ್ನು ನಿರಾಕರಿಸಲಾಗದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬೆಳಗಾವಿ ಕಾರಾಗೃಹದಲ್ಲಿರುವ ಶ್ರೀಧರ ಹಾಗೂ ಸಿದ್ದವ್ವ ಅಲಿಯಾಸ್ ಪ್ರಿಯಾಂಕಾ ಜಗಮಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರಿದ್ದ ಹೈಕೋರ್ಟ್ನ ಪೀಠ ಈ ಆದೇಶ ನೀಡಿದೆ. ಮದುವೆಗಾಗಿ ಇಬ್ಬರೂ 90 ದಿನಗಳ ಪೆರೋಲ್ ಕೋರಿದ್ದರು. ಆದರೆ, ಪೀಠವು ಮದುವೆಯ ದಿನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ಅವಕಾಶ ಕಲ್ಪಿಸಿದೆ.
ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಇಬ್ಬರು ಈಗ ಮದುವೆಗಾಗಿ ಪೆರೋಲ್ ಕೋರುತ್ತಿರುವುದು ನೈತಿಕ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಆದರೂ ಅರ್ಜಿಯನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಪರಿಶೀಲಿಸಬೇಕಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ ಹಾಗೂ ವಿವಿಧ ಹೈಕೋರ್ಟ್ಗಳ ಆದೇಶಗಳನ್ನು ಉಲ್ಲೇಖಿಸಿದ ಪೀಠ, ಕೈದಿಗಳು ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳನ್ನು ಉಳಿಸಿಕೊಳ್ಳಲು ಪೆರೋಲ್ ನೆರವಾಗುತ್ತದೆ. ಅದು ಅವರ ಸುಧಾರಣೆ ಮತ್ತು ಪುನರ್ವಸತಿಯ ಪ್ರಮುಖ ಭಾಗವಾಗಿದೆ ಎಂದು ತಿಳಿಸಿದೆ.
ಅರ್ಜಿದಾರರು ವಿಚಾರಣಾ ಅವಧಿ ಸೇರಿದಂತೆ ಒಟ್ಟು ಮೂರು ವರ್ಷ, ಐದು ತಿಂಗಳು, 25 ದಿನ ಜೈಲುವಾಸ ಅನುಭವಿಸಿದ್ದಾರೆ. ಕಾರಾಗೃಹದಲ್ಲಿ ಅವರ ನಡವಳಿಕೆಯ ಕುರಿತು ಪ್ರತಿಕೂಲ ಅಭಿಪ್ರಾಯಗಳಿಲ್ಲ ಎಂಬ ಅಂಶವನ್ನೂ ಪೀಠ ಪರಿಗಣಿಸಿದೆ. ನಿಯಮಗಳ ಪ್ರಕಾರ ಜೈಲಿನ ಆವರಣದಲ್ಲಿ ಮದುವೆ ನಡೆಸಲು ಅವಕಾಶವಿಲ್ಲ ಎಂಬ ಸರ್ಕಾರಿ ವಕೀಲರ ವಾದವನ್ನು ಗಮನಿಸಿ, ಹೊರಗೆ ಮದುವೆಯಾಗಲು ಸೀಮಿತ ಪೆರೋಲ್ ನೀಡಿದೆ.
ಪೊಲೀಸ್ ಭದ್ರತೆಯಲ್ಲಿ ಮದುವೆ: ಮದುವೆ ಸಮಾರಂಭಕ್ಕೆ ಜೈಲರ್ ನಿಯೋಜಿಸುವ ಸೂಕ್ತ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಬೇಕು. ಮದುವೆಯ ದಿನ ಸಂಜೆ 5 ಗಂಟೆಯೊಳಗೆ ಇಬ್ಬರೂ ಬೆಳಗಾವಿ ಕಾರಾಗೃಹಕ್ಕೆ ಮರಳಬೇಕು ಎಂದು ಪೀಠ ಷರತ್ತು ವಿಧಿಸಿದೆ. ಆದೇಶದ ಪ್ರತಿ ದೊರೆತ ಒಂದು ವಾರದೊಳಗೆ ಜೈಲು ಅಧಿಕಾರಿಗಳು ಸೂಕ್ತ ಆದೇಶ ಹೊರಡಿಸಬೇಕು ಎಂದೂ ಸೂಚಿಸಿದೆ.
ಪತಿ ಹತ್ಯೆಗೆ ಜೀವಾವಧಿ ಶಿಕ್ಷೆ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಭೈರನಟ್ಟಿಯ ನಿವಾಸಿಗಳಾದ ಸಿದ್ದವ್ವ ಮತ್ತು ಶ್ರೀಧರ, ಸಿದ್ದವ್ವಳ ಪತಿಯ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸಿದ್ದವ್ವ ಸಂಚು ರೂಪಿಸಿ ಶ್ರೀಧರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಪ್ರಸ್ತುತ ಇಬ್ಬರೂ ಬೆಳಗಾವಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.




















