ಬೆಂಗಳೂರು: ಫಾರ್ಮ್ 7 ಅರ್ಜಿಗಳ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚುನಾವಣಾ ಆಯೋಗದ ಮೇಲೆ ರಾಜಕೀಯ ಒತ್ತಡ ಹೇರುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವ ಅಧಿಕಾರ ಸಿಎಂಗೆ ಇಲ್ಲ. ಫಾರ್ಮ್ 7 ಅಡಿ 25 ಸಾವಿರ ಅರ್ಜಿಗಳು ಬಂದಿವೆ ಎನ್ನಲಾಗುತ್ತಿದೆ. ಹಾಗಿದ್ದರೆ 15 ಲಕ್ಷ ಮತದಾರರ ಹೆಸರುಗಳನ್ನು ಹೇಗೆ ಅಳಿಸಲು ಸಾಧ್ಯ?” ಎಂದು ಪ್ರಶ್ನಿಸಿದರು.
ಅರ್ಹ ಮತದಾರರ ಹೆಸರು ಯಾವುದೇ ಕಾರಣಕ್ಕೂ ಪಟ್ಟಿಯಿಂದ ಕೈಬಿಡಬಾರದು ಎಂಬುದು ಬಿಜೆಪಿಯ ನಿಲುವು. ಆದರೆ ಅನರ್ಹರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಮತದಾನ ಮಾಡುವವರ ರಕ್ಷಣೆಗೆ ಕಾಂಗ್ರೆಸ್ ನಿಂತಿದೆ ಎಂದು ಅಶೋಕ ಆರೋಪಿಸಿದರು.
ಮುಖ್ಯಮಂತ್ರಿಗಳು ಸರ್ಕಾರದ ಕೆಲಸ ನಿರ್ವಹಿಸುವ ಬದಲು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದ ಅವರು, ವಿದೇಶಿ ನಾಗರಿಕರಿಗೆ ಮತದಾನದ ಹಕ್ಕು ನೀಡಬಾರದು. ಈ ವಿಚಾರದಲ್ಲೂ ಕಾಂಗ್ರೆಸ್ ಸ್ಪಷ್ಟ ನಿಲುವು ತಾಳಬೇಕು ಎಂದು ಒತ್ತಾಯಿಸಿದರು.




















