ಮೈಸೂರು: ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಪೆಟ್ರೋಲ್ ಸುರಿದು, ಆಕೆಯನ್ನು ತಬ್ಬಿಕೊಂಡು ಬೆಂಕಿ ಹಚ್ಚಿಕೊಳ್ಳುವ ಮೂಲಕ ಯುವಕನೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಹಾಗೂ ಈ ಮೂಲಕ ಆಕೆಯನ್ನು ಕೊಲ್ಲಲು ಯತ್ನಿಸಿದ ಆಘಾತಕಾರಿ ಘಟನೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಚಂದನ್ (27) ಈ ಕೃತ್ಯ ಎಸಗಿದ್ದು, ಈತನಿಗೆ ಶೇ. 80ರಷ್ಟು ಸುಟ್ಟ ಗಾಯಗಳಾಗಿದ್ದರೆ, ಈತನಿಂದ ತಪ್ಪಿಸಿಕೊಂಡ ಯುವತಿಗೂ ಶೇ. 20ರಷ್ಟು ಸುಟ್ಟ ಗಾಯಗಳಾಗಿವೆ.
ಈ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದು, ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದರೆ, ಯುವಕ ಸಾವು-ಬದುಕಿನ ನಡುವೆ ಸೆಣಸಾಡುತ್ತಿದ್ದಾನೆ. ಈ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ನಗರದಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿಯನ್ನು ಆಕೆ 9ನೇ ತರಗತಿಯಲ್ಲಿದ್ದಾಗಿನಿಂದಲೂ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಯುವತಿ ಇದಕ್ಕೆ ಸಮ್ಮತಿಸಿರಲಿಲ್ಲ. ಘಟನೆ ಸಂಬಂಧ ಯುವತಿ ಹೇಳಿಕೆ ಪಡೆದಿರುವ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.






















