SK Home Ad
Home ನಮ್ಮ ಜಿಲ್ಲೆ ಕಲಬುರಗಿ ಸಿದ್ದರಾಮಯ್ಯ ಪ್ರತಿಮೆ ತೆರವು: ಕುರುಬರಿಂದ ಬೃಹತ್ ಪ್ರತಿಭಟನೆ

ಸಿದ್ದರಾಮಯ್ಯ ಪ್ರತಿಮೆ ತೆರವು: ಕುರುಬರಿಂದ ಬೃಹತ್ ಪ್ರತಿಭಟನೆ

0
3

ಕಲಬುರಗಿ: ನಗರದ ಹೈಕೋರ್ಟ್ ಬಳಿಯ ವೃತ್ತದಲ್ಲಿ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಮೆ ತೆರವುಗೊಳಿಸಿದ್ದನ್ನು ಖಂಡಿಸಿ ಮಂಗಳವಾರ ಕರ್ನಾಟಕ ರಾಜ್ಯ ಕುರುಬರ ಸಂಘ ಹಾಗೂ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಗುರುಪೀಠದ ಶ್ರೀ ಲಿಂಗಬೀರದೇವರ ನೇತೃತ್ವದಲ್ಲಿ ಕುರುಬ ಸಮುದಾಯ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿತು.

ಸೂಪರ್ ಮಾರ್ಕೆಟ್‌ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸುಮಾರು 3 ಗಂಟೆ ಕಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದರು. ಆಗ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಪ್ರತಿಮೆ ತೆರವುಗೊಳಿಸಿದ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕುರುಬರ ಸಂಘದ ರಾಜ್ಯಾಧ್ಯಕ್ಷ ಎಂ. ಈರಣ್ಣ, ಪ್ರಧಾನ ಕಾರ್ಯದರ್ಶಿ ಎಂ.ವಿ. ಸೋಮಶೇಖರ, ಖಜಾಂಚಿ ಕೆ.ಎಂ. ಕೃಷ್ಣಮೂರ್ತಿ, ನಿರ್ದೇಶಕ ಪಿ.ಟಿ. ಜಗದೀಶ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಕಲಬುರಗಿ ಹೈಕೋರ್ಟ್ ಪೀಠದ ಅಫಜಲಪುರ ರಸ್ತೆ ಮಾರ್ಗದಲ್ಲಿ ಸೆ. 16ರಂದು ಕೆಲ ಯುವಕರು ಗೊತ್ತಿಲ್ಲದೆ ಸಿದ್ದರಾಮಯ್ಯನವರ ಮೂರ್ತಿ ಪ್ರತಿಷ್ಠಾಪಿದ್ದಾರೆ. ಈ ಬಗ್ಗೆ 2023ರಿಂದಲೂ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಪಾಲಿಕೆಯ ಕಸದ ಗಾಡಿಯಲ್ಲಿ ಮೂರ್ತಿ ಹಾಕಿಕೊಂಡು ಹೋಗಿರುವುದು ಸರಿಯಲ್ಲ, ಸಮಾಜದವರ ಗಮನಕ್ಕೆ ತಂದಿದ್ದರೆ ಗೌರವಯುತವಾಗಿ ನಾವೇ ತೆರವುಗೊಳಿಸುತ್ತಿದ್ದೆವು. ಸಿದ್ದರಾಮಯ್ಯನವರ ಪ್ರತಿಮೆಗೆ ಅವಮಾನಿಸಿದ್ದು ಖಂಡನೀಯ ಎಂದರು.

ಇನ್ನೂ 15 ದಿನಗಳಲ್ಲಿ ಅದೇ ಜಾಗದಲ್ಲಿ ಪಲ್ಲಕ್ಕಿಯೊಂದಿಗೆ ಮೂರ್ತಿ ಪ್ರತಿಷ್ಠಾಪಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ನಿರ್ಲಕ್ಷ್ಯಕ್ಕಾಗಿ ಪಾಲಿಕೆ ಆಯುಕ್ತರನ್ನು ಅಮಾನತು ಮಾಡಬೇಕು. ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒಂದೊಮ್ಮೆ ಪುನಃ ಪ್ರತಿಮೆ ಪ್ರತಿಷ್ಠಾಪಿಸದಿದ್ದರೆ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ, ನಾವು ಯಾವ ಪಕ್ಷದ ಗುಲಾಮರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ ಭಗವಂತರಾಯ ಪಾಟೀಲ್, ಬೈಲಪ್ಪ ನೆಲೋಗಿ, ಮಹಾಂತೇಶ ಕೌಲಗಿ, ಅಮೃತ ಚಿಮ್ಮಕೋಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.