SK Home Ad
Home ನಮ್ಮ ಜಿಲ್ಲೆ ಡಿಜೆ ಬಳಕೆಗೆ ಅನುಮತಿ ನಿರಾಕರಣೆ: ಗಣೇಶ ಮೂರ್ತಿ ವಾಪಸ್ ತಂದು ಮರುಪ್ರತಿಷ್ಠಾಪನೆ

ಡಿಜೆ ಬಳಕೆಗೆ ಅನುಮತಿ ನಿರಾಕರಣೆ: ಗಣೇಶ ಮೂರ್ತಿ ವಾಪಸ್ ತಂದು ಮರುಪ್ರತಿಷ್ಠಾಪನೆ

0
43

ಹಿರೇಕೆರೂರು (ಹಾವೇರಿ): ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಯುವಕರು, ಮೆರವಣಿಗೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿ ಗಣೇಶ ಮೂರ್ತಿಯನ್ನು ವಾಪಸ್ ತಂದು ಮರುಪ್ರತಿಷ್ಠಾಪಿಸಿದ ಘಟನೆ ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕೇರೂರು ಗ್ರಾಮದ ಬನಶಂಕರಿ ಗಜಾನನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಆರಂಭವಾಗಿತ್ತು. ಆದರೆ, ನಿಯಮಗಳ ಹಿನ್ನೆಲೆಯಲ್ಲಿ ಮೆರವಣಿಗೆಯಲ್ಲಿ ಡಿಜೆ ಬಳಸಲು ಪೊಲೀಸರು ಅನುಮತಿ ನಿರಾಕರಿಸಿದರು. ಇದರಿಂದ ಪೊಲೀಸ್ ಸಿಬ್ಬಂದಿ ಹಾಗೂ ಯುವಕ ಸಂಘದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಕೆಲಕಾಲ ವಾಗ್ವಾದ ನಡೆಯಿತು.

ಡಿಜೆ ಬಳಕೆಗೆ ಅನುಮತಿ ನೀಡಬೇಕು ಎಂದು ಸಂಘದ ಸದಸ್ಯರು ಪಟ್ಟು ಹಿಡಿದರು. ಆದರೆ, ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಸುಮಾರು 600 ಮೀಟರ್‌ವರೆಗೆ ಸಾಗಿದ್ದ ವಿಸರ್ಜನಾ ಮೆರವಣಿಗೆಯನ್ನು ಸ್ಥಗಿತಗೊಳಿಸಿ, ಗಣೇಶ ಮೂರ್ತಿಯನ್ನು ವಾಪಸ್ ಗ್ರಾಮಕ್ಕೆ ತೆಗೆದುಕೊಂಡು ಬಂದು ಮರುಪ್ರತಿಷ್ಠಾಪನೆ ಮಾಡಿದರು.

ಡಿಜೆ ಬಳಕೆಗೆ ಅನುಮತಿ ನೀಡುವವರೆಗೂ ಗಣೇಶ ಮೂರ್ತಿಯ ವಿಸರ್ಜನೆ ಮಾಡುವುದಿಲ್ಲ ಎಂದು ಸಂಘದ ಸದಸ್ಯರು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಡಿಜೆ ನಿರ್ಬಂಧ ಮುಂದುವರಿಸಿದರೆ ಚಿಕ್ಕೇರೂರು ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಘಟನೆ ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.