SK Home Ad
Home ನಮ್ಮ ಜಿಲ್ಲೆ ದಾವಣಗೆರೆ ನಿಮ್ಮ ಕಾಲಿಗೆ ಬೀಳುವೆ ನನ್ನನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ: ಸಚಿವ ಬಸವಂತಪ್ಪ ಮನವಿ

ನಿಮ್ಮ ಕಾಲಿಗೆ ಬೀಳುವೆ ನನ್ನನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ: ಸಚಿವ ಬಸವಂತಪ್ಪ ಮನವಿ

0
73

ದಾವಣಗೆರೆ: “ನಾನು ಹುಟ್ಟಿ ಬೆಳೆದ ಗಾಂಧಿನಗರದಲ್ಲಿ ನೆರೆಹೊರೆಯವರು ಮುಂದಿಡುವ ಬೇಡಿಕೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ದಾವಣಗೆರೆ ನಗರದಲ್ಲಿ ನನ್ನದೇನೂ ನಡೆಯುವುದಿಲ್ಲ. ಕೈಮುಗಿದು ಕಾಲಿಗೆ ಬೀಳುವೆ, ನನ್ನನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ” ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಮನವಿ ಮಾಡಿದರು.

ದಾವಣಗೆರೆಯ ಗಾಂಧಿನಗರದಲ್ಲಿ ಮಾದಿಗ ಸಮಾಜದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ವೇದಿಕೆಯಲ್ಲಿದ್ದ ಮಲ್ಲಿಕಾರ್ಜುನ್ ಅವರತ್ತ ತಮ್ಮ ಮನವಿಯನ್ನು ನೇರವಾಗಿ ಮುಂದಿಟ್ಟರು. ಮಲ್ಲಿಕಾರ್ಜುನ್ ಅವರು ಬಸವಂತಪ್ಪ ಅವರ ಮಾತುಗಳನ್ನು ಮೌನವಾಗಿ ಆಲಿಸಿದರು.

“ಪ್ರತಿ ಚುನಾವಣೆಯಲ್ಲೂ ಗಾಂಧಿನಗರದ ಮತಗಳು ಇಡಿಯಾಗಿ ಕಾಂಗ್ರೆಸ್‌ಗೆ ಬೀಳುತ್ತಿದ್ದವು. ಆಂತರಿಕ ಭಿನ್ನಾಭಿಪ್ರಾಯದಿಂದ ಉಪಚುನಾವಣೆಯಲ್ಲಿ ಕೆಲ ವ್ಯತ್ಯಾಸಗಳಾಗಿರುವುದು ನಿಜ. ಆದರೆ, ನಾವು ಯಾರಿಗೂ ಮೋಸ ಮಾಡಿಲ್ಲ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮಲ್ಲಣ್ಣ (ಮಲ್ಲಿಕಾರ್ಜುನ್) ಪ್ರಯತ್ನಿಸಿದರೆ ಸಾಯುವವರೆಗೂ ಅವರ ಜೊತೆಗೆ ನಿಲ್ಲುತ್ತೇವೆ” ಎಂದು ಬಸವಂತಪ್ಪ ಹೇಳಿದರು.

“ಶಾಮನೂರು ಕುಟುಂಬ ನಮ್ಮನ್ನು ಬೆಳೆಸಿದೆ. ಅವರಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕಾಫಿ ಕಟ್ಟೆಯಲ್ಲಿ ಕುಳಿತು ಆಡುವ ಮಾತುಗಳಿಗೆ ಕಿವಿಗೊಡುವುದರ ಜೊತೆಗೆ ನಮ್ಮ ನೋವುಗಳನ್ನೂ ಆಲಿಸಬೇಕು. ಮುಂದಿನ ಚುನಾವಣೆಯಲ್ಲಿ ಗಾಂಧಿನಗರದಲ್ಲಿ ಕಾಂಗ್ರೆಸ್‌ಗೆ ಕಡಿಮೆ ಮತಗಳು ಬಿದ್ದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ” ಎಂದು ಅವರು ಹೇಳಿದರು.

ನನ್ನ ಸೋಲು ಬಸವಂತಪ್ಪಗೆ ಅವಕಾಶ: “ವಿಧಾನಸಭಾ ಚುನಾವಣೆಯಲ್ಲಿ ನಾನು ಅನುಭವಿಸಿದ ಸೋಲು ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವರಾಗುವ ಅವಕಾಶ ಕಲ್ಪಿಸಿತು” ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

“2023ರಲ್ಲಿ ಪಕ್ಷದ ಸೂಚನೆಯನ್ನು ಮೀರಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡೆ. ನಂತರ ನನ್ನನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬೇಕು ಹಾಗೂ ಬಸವಂತಪ್ಪ ಅವರನ್ನೂ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬೇಡಿಕೆಯನ್ನು ಪಕ್ಷದ ಮುಂದೆ ಇಟ್ಟಿದ್ದೆ. ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಪಕ್ಷ ಸೂಚಿಸಿತು. ನಾನು ಬಸವಂತಪ್ಪ ಅವರಿಗೆ ಅವಕಾಶ ಮಾಡಿಕೊಟ್ಟೆ” ಎಂದು ಮಾಜಿ ಸಚಿವ ಎಚ್. ಆಂಜನೇಯ ವಿವರಿಸಿದರು.