SK Home Ad
Home ವಿಶೇಷ ಸುದ್ದಿ ವಿಶ್ವ ಹೃದಯ ದಿನದಂದು ತಜ್ಞರ ಎಚ್ಚರಿಕೆ: ಟ್ರಾಫಿಕ್‌ ಒತ್ತಡಕ್ಕೂ ಹೃದಯಕ್ಕೂ ನಂಟು

ವಿಶ್ವ ಹೃದಯ ದಿನದಂದು ತಜ್ಞರ ಎಚ್ಚರಿಕೆ: ಟ್ರಾಫಿಕ್‌ ಒತ್ತಡಕ್ಕೂ ಹೃದಯಕ್ಕೂ ನಂಟು

0
154

ಬೆಂಗಳೂರು: ಹೃದಯದ ಆರೋಗ್ಯದ ಮೇಲೆ ಕೊಲೆಸ್ಟ್ರಾಲ್, ರಕ್ತದೊತ್ತಡ, ಮಧುಮೇಹ, ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆ ಸೇರಿದಂತೆ ಹಲವು ಅಂಶಗಳು ಪರಿಣಾಮ ಬೀರುತ್ತವೆ. ಆದರೆ, ನಮ್ಮ ದೈನಂದಿನ ಜೀವನದಲ್ಲಿ ಒತ್ತಡವನ್ನು ಹೇಗೆ ಎದುರಿಸುತ್ತೇವೆ ಎಂಬುದೂ ಹೃದಯರಕ್ತನಾಳದ ಆರೋಗ್ಯದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ತಮ್ಮ ಸ್ವಂತ ವಾಹನ ಚಲಾಯಿಸಿಕೊಂಡು ಮೂಲಕ ಕೆಲಸಕ್ಕೆ ತೆರಳುವುದು ಮತ್ತು ಮನೆಗೆ ಮರಳುವುದು ಅನೇಕ ಮಂದಿಗೆ ಒತ್ತಡ ಹೆಚ್ಚಳದ ಅನುಭವ ಉಂಟು ಮಾಡುತ್ತಿದೆ.

ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ಟ್ರಾಫಿಕ್‌ ಜಾಮ್‌, ವಾಹನ ಚಾಲಕರ ಆಕ್ರಮಣಕಾರಿ ವರ್ತನೆ, ನಿರಂತರ ಹಾರ್ನ್‌ ಬಳಕೆ, ಅತಿವೇಗದ ಚಾಲನೆ ಮತ್ತು ರಸ್ತೆ ಮೇಲಿನ ಕೋಪದ ವರ್ತನೆಗಳು ಚಾಲಕರ ಮಾನಸಿಕ ಹಾಗೂ ದೈಹಿಕ ಒತ್ತಡ ಹೆಚ್ಚಿಸುತ್ತಿವೆ. ಆದರೆ, ಒಂದೇ ಒಂದು ಒತ್ತಡದ ಪ್ರಯಾಣ, ಒಮ್ಮೆ ಹಾರ್ನ್‌ ಹಾಕುವುದು ಅಥವಾ ಒಂದು ರಸ್ತೆಯಲ್ಲಿ ಗಲಾಟೆ ಘಟನೆ ನೇರವಾಗಿ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಸತತವಾಗಿ ನಡೆಯುವ ಈ ಪ್ರಕ್ರಿಯೆಗಳು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಗಣಿಸಬೇಕಾಗುತ್ತದೆ.

ಒತ್ತಡದ ಸಂದರ್ಭದಲ್ಲಿ ದೇಹದೊಳಗೆ ಏನಾಗುತ್ತದೆ?: ವ್ಯಕ್ತಿಯು ಯಾವುದೇ ರೀತಿಯ ಅಪಾಯ, ಆತಂಕ ಅಥವಾ ನಿರಾಶೆಯನ್ನು ಅನುಭವಿಸಿದಾಗ ದೇಹದಲ್ಲಿ ‘ಹೋರಾಟ ಅಥವಾ ಪಲಾಯನ’ ಪ್ರತಿಕ್ರಿಯೆ ಸಕ್ರಿಯವಾಗುತ್ತದೆ. ಈ ಸಂದರ್ಭದಲ್ಲಿ ಅಡ್ರಿನಲಿನ್‌ ಮತ್ತು ಕಾರ್ಟಿಸೋಲ್‌ ಸೇರಿದಂತೆ ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇವು ರಕ್ತದೊತ್ತಡ ಮತ್ತು ಹೃದಯ ಬಡಿತ ಹೆಚ್ಚಿಸುವ ಮೂಲಕ ಎದುರಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ದೇಹವನ್ನು ಸಜ್ಜುಗೊಳಿಸುತ್ತವೆ. ಇಂತಹ ಪ್ರತಿಕ್ರಿಯೆಗಳು ಪದೇಪದೇ ಸಂಭವಿಸಿದಾಗ ಪರಿಸ್ಥಿತಿ ಬದಲಾಗುತ್ತದೆ. ಅದರಲ್ಲೂ ಅಸಮರ್ಪಕ ನಿದ್ರೆ, ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ, ಅನಾರೋಗ್ಯಕರ ಆಹಾರ ಪದ್ಧತಿ ಅಥವಾ ಈಗಾಗಲೇ ರಕ್ತದೊತ್ತಡ ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿದ್ದರೆ, ಹೃದಯರಕ್ತನಾಳದ ಕಾಯಿಲೆಗಳ ಒಟ್ಟಾರೆ ಅಪಾಯ ಮತ್ತಷ್ಟು ಹೆಚ್ಚಾಗಬಹುದು.

ವಿಶ್ವ ಆರೋಗ್ಯ ಸಂಸ್ಥೆಯೂ ದೀರ್ಘಕಾಲ ಸಂಚಾರದ ಶಬ್ದಕ್ಕೆ ಒಡ್ಡಿಕೊಳ್ಳುವುದು ಹಾಗೂ ಹೃದಯರಕ್ತನಾಳದ ಹಲವು ಸಮಸ್ಯೆಗಳ ನಡುವೆ ಸಂಬಂಧವಿದೆ ಎಂಬುದನ್ನೂ ಪತ್ತೆ ಹಚ್ಚಿದೆ. ನಿರಂತರ ಸಂಚಾರದ ವೇಳೆಯ ಶಬ್ದವು ಅಧಿಕ ರಕ್ತದೊತ್ತಡ ಮತ್ತು ಹೃದಯಕ್ಕೆ ರಕ್ತ ಪೂರೈಕೆಯಾಗುವ ನಾಳಗಳಲ್ಲಿ ಉಂಟಾಗುವ ಕಾಯಿಲೆ ಸೇರಿದಂತೆ ವಿವಿಧ ಹೃದಯರಕ್ತನಾಳದ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರಬಹುದು.

ಕೇವಲ ಹಾರ್ನ್ ಬಳಕೆ ಕಾರಣವೇ?: ರಸ್ತೆಯಲ್ಲಿ ಎದುರಾಗುವ ಒತ್ತಡಕ್ಕೆ ಕೇವಲ ಹಾರ್ನ್‌ ಬಳಕೆಯೇ ಕಾರಣವಲ್ಲ. ಅತಿವೇಗದ ಚಾಲನೆ, ಹಠಾತ್ತನೆ ವಾಹನದ ಲೇನ್‌ ಬದಲಿಸುವುದು, ಅಪಾಯಕಾರಿ ರೀತಿಯಲ್ಲಿ ಮುಂದಿರುವ ವಾಹನವನ್ನು ಹಿಂದಿಕ್ಕುವುದು, ಮುಂಭಾಗದ ವಾಹನವನ್ನು ಅದರ ಅತೀ ಸಮೀಪದಲ್ಲಿ ಚಾಲನೆ ಮಾಡುವುದು ಹಾಗೂ ರಸ್ತೆಯಲ್ಲಿ ಇತರ ಚಾಲಕರೊಂದಿಗೆ ಕೋಪದಿಂದ ವರ್ತಿಸುವುದು ಕೂಡ ದೇಹದಲ್ಲಿ ಒತ್ತಡದ ಪ್ರತಿಕ್ರಿಯೆ ಉಂಟುಮಾಡಬಹುದು.

ಕೆಲವು ಚಾಲಕರಲ್ಲಿ ಈ ಒತ್ತಡದ ಪ್ರಮಾಣ ಎಷ್ಟರ ಮಟ್ಟಿಗೆ ಹೆಚ್ಚುತ್ತದೆ ಎಂದರೆ, ಕೆಲಸದ ದಿನ ಆರಂಭಿಸುವ ಮೊದಲೇ ವಾಹನ ಚಾಲನೆಯೇ ಅವರಿಗೆ ಒತ್ತಡದ ಅನುಭವವಾಗುತ್ತದೆ. ಕೆಲಸ ಮುಗಿಸಿ ಮನೆಗೆ ಮರಳುವ ಸಂದರ್ಭದಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯಬಹುದು. ದಿನವಿಡೀ ಎಚ್ಚರಿಕೆಯ ಸ್ಥಿತಿಯಲ್ಲಿದ್ದ ದೇಹ ಮತ್ತು ಮನಸ್ಸಿಗೆ ಮನೆಗೆ ಮರಳಿದ ನಂತರವೂ ಸಹಜ ಸ್ಥಿತಿಗೆ ಬರಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತದೆ.

ಈ ಕುರಿತು ಬೆಂಗಳೂರಿನ ಹೆಣ್ಣೂರು ರಸ್ತೆಯ ಸ್ಪರ್ಶ್‌ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಕನ್ಸಲ್ಟೆಂಟ್ ಡಾ. ಆರ್‌.ಎಸ್‌. ವೆಂಕಟೇಶುಲು ಮಾತನಾಡಿ, ಹೃದಯದ ಆರೋಗ್ಯದ ಬಗ್ಗೆ ಮಾತನಾಡುವಾಗ ನಾವು ಸಾಮಾನ್ಯವಾಗಿ ಏನು ತಿನ್ನುತ್ತೇವೆ ಅಥವಾ ನಮ್ಮ ವೈದ್ಯಕೀಯ ವರದಿ ಹೇಗಿದೆ ಎಂಬುದರತ್ತ ಗಮನ ಹರಿಸುತ್ತೇವೆ. ಆದರೆ, ನಾವು ಪ್ರತಿದಿನ ಯಾವ ರೀತಿಯ ಪರಿಸರದಲ್ಲಿ ಜೀವನ ನಡೆಸುತ್ತೇವೆ ಎಂಬುದನ್ನೂ ಮರೆಯಬಾರದು. ನಿರಂತರ ಒತ್ತಡದ ಸಂಚಾರ ಪರಿಸ್ಥಿತಿ, ಆಕ್ರಮಣಕಾರಿ ಚಾಲಕರು, ಅನಗತ್ಯ ಹಾರ್ನ್‌ ಬಳಕೆ ಮತ್ತು ದೀರ್ಘಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದರಿಂದ ಉಂಟಾಗುವ ಕಿರಿಕಿರಿ ದೇಹವನ್ನು ನಿರಂತರವಾಗಿ ಎಚ್ಚರಿಕೆಯ ಸ್ಥಿತಿಯಲ್ಲಿರಿಸಬಹುದು” ಎಂದು ಹೇಳಿದ್ದಾರೆ.

“ಕೇವಲ ಹಾರ್ನ್‌ ಹಾಕುವುದು ಅಥವಾ ಒತ್ತಡದ ಪ್ರಯಾಣ ನೇರವಾಗಿ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳುವುದು ಸರಿಯಲ್ಲ. ರಕ್ತದೊತ್ತಡ, ಮಧುಮೇಹ, ಧೂಮಪಾನ, ಬೊಜ್ಜು, ವ್ಯಾಯಾಮದ ಕೊರತೆ ಮತ್ತು ನಿದ್ರೆಯ ಕೊರತೆ ಸೇರಿದಂತೆ ಹಲವು ಅಂಶಗಳು ಹೃದಯರಕ್ತನಾಳದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದಾಗ್ಯೂ, ನಮ್ಮ ದೈನಂದಿನ ಜೀವನದಲ್ಲಿ ಮತ್ತು ನಾವು ಸಂಚರಿಸುವ ರಸ್ತೆಯಲ್ಲಿ ಇರುವ ಅನಗತ್ಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾದರೆ, ಅದು ಹೃದಯದ ಆರೋಗ್ಯದ ದೃಷ್ಟಿಯಿಂದ ಉತ್ತಮ ಕ್ರಮವಾಗಲಿದೆ” ಎಂದು ಅವರು ಹೇಳಿದರು.