ಹಾವೇರಿ: ಎರಡು ದಶಕಗಳಿಂದ ಹೊತ್ತಿ ಉರಿಯುತ್ತಿದ್ದ ಆಸ್ತಿ ವಿವಾದವೊಂದು ಕೋರ್ಟ್ ತೀರ್ಪಿನ ಬೆನ್ನಲ್ಲೇ ರಕ್ತಪಾತಕ್ಕೆ ತಿರುಗಿ, ತಾಯಿ-ಮಗನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದ ಘಟನೆ ಹಾನಗಲ್ಲ ತಾಲೂಕಿನ ಕೂಸನೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಶಿರಸಿ ನಿವಾಸಿಗಳಾದ ಪ್ರೇಮಾ ಬಡಿಗೇರ (55) ಹಾಗೂ ಅವರ ಪುತ್ರ ಅವಿನಾಶ್ ಬಡಿಗೇರ (35) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಂಧಿಸಿದಂತೆ ತಿರಕಯ್ಯ ಹೊಸಮಠ ಹಾಗೂ ಬಸವರಾಜ ಹೊಸಮಠ ಎಂಬುವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.
ಸುಮಾರು 20ವರ್ಷಗಳ ಹಿಂದೆ ಪ್ರೇಮಾ ಬಡಿಗೇರ ಅವರಿಂದ ಮನೆ ಹಾಗೂ ಖಾಲಿ ಜಾಗವನ್ನು ಖರೀದಿಸಿದ್ದ ವಿಚಾರಕ್ಕೆ ಸಂಬಂಧಿಸಿ ಎರಡೂ ಕುಟುಂಬಗಳ ನಡುವೆ ಹಣಕಾಸು ಹಾಗೂ ಆಸ್ತಿ ಸಂಬಂಧಿತ ವಿವಾದ ಆರಂಭವಾಗಿತ್ತು. ಗ್ರಾಮದಲ್ಲಿಯೇ ಹಲವು ಬಾರಿ ರಾಜಿ ಪಂಚಾಯಿತಿ ನಡೆಸಿದರೂ ಸಮಸ್ಯೆ ಇತ್ಯರ್ಥವಾಗಿರಲಿಲ್ಲ. ಅಂತಿಮವಾಗಿ ವಿವಾದ ಕೋರ್ಟ್ ಮೆಟ್ಟಿಲೇರಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕೋರ್ಟ್ ತೀರ್ಪು ಪ್ರಕಟವಾಗಿದ್ದು, ಪ್ರೇಮಾ ಹಾಗೂ ಅವಿನಾಶ್ ಪರವಾಗಿ ತೀರ್ಪು ಬಂದಿತ್ತು ಎನ್ನಲಾಗಿದೆ. ತೀರ್ಪಿನ ಬಳಿಕ ಮಲಗುಂದ ಕ್ರಾಸ್ ಬಳಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಕೋರ್ಟ್ ಆದೇಶದಂತೆ ಮನೆ ಬಿಡಿಸುವ ಸಲುವಾಗಿ ಪ್ರೇಮಾ ಹಾಗೂ ಅವಿನಾಶ್ ಕೂಸನೂರಿಗೆ ಬಂದಿದ್ದರು.
ಈ ವೇಳೆ ಮತ್ತೆ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿದೆ. ಆರೋಪಿಗಳು ಕಲ್ಲಿನಿಂದ ಹೊಡೆದು ತಾಯಿ-ಮಗನನ್ನು ಹತ್ಯೆ ಮಾಡಿದ್ದಾರೆ. ಮೃತ ಪ್ರೇಮಾ ಬಡಿಗೇರ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದರು. ಪುತ್ರ ಅವಿನಾಶ್ ಪೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಹಾಡುಹಗಲೇ ನಡೆದ ಈ ಜೋಡಿ ಕೊಲೆ ಘಟನೆಯಿಂದ ಕೂಸನೂರು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.




















