ದಾವಣಗೆರೆ: ಅಪ್ರಾಪ್ತ ಬಾಲಕಿಯನ್ನು ಮನೆವರೆಗೂ ಹಿಂಬಾಲಿಸಿಕೊಂಡು ಹೋಗಿ ಚುಡಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಹಾಸ್ಟೆಲ್ನ ವಿದ್ಯಾರ್ಥಿಯೊಬ್ಬನಿಗೆ ಸ್ಥಳೀಯ ಮಹಿಳೆಯರು ಕಪಾಳಮೋಕ್ಷ ಮಾಡಿ, ಬುದ್ಧಿವಾದ ಹೇಳಿದ ಘಟನೆ ದಾವಣಗೆರೆಯ ಶಂಕರ ವಿಹಾರ ಬಡಾವಣೆಯಲ್ಲಿ ನಡೆದಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ವಾಸವಿದ್ದುಕೊಂಡು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಬಾಲಕಿಯನ್ನು ಹಿಂಬಾಲಿಸಿ ಚುಡಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಚಾರ ತಿಳಿದ ಸ್ಥಳೀಯ ಮಹಿಳೆಯರು ಹಾಸ್ಟೆಲ್ಗೆ ತೆರಳಿ ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಭಾಗದಲ್ಲಿ ಹಾಸ್ಟೆಲ್ನ ಕೆಲವು ವಿದ್ಯಾರ್ಥಿಗಳು ಸ್ಥಳೀಯ ಬಾಲಕಿಯರು, ಅಪ್ರಾಪ್ತೆಯರು ಹಾಗೂ ಯುವತಿಯರನ್ನು ಚುಡಾಯಿಸುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ತಡರಾತ್ರಿವರೆಗೂ ಹೊರಗಡೆ ಸುತ್ತಾಡುವುದು, ಮದ್ಯಪಾನ ಸೇರಿದಂತೆ ದುಶ್ಚಟಗಳಿಗೆ ಒಳಗಾಗಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸ್ಟೆಲ್ ಸ್ಥಳಾಂತರಿಸಿ: ಹಾಸ್ಟೆಲ್ನ ಕೆಲವು ವಿದ್ಯಾರ್ಥಿಗಳ ವರ್ತನೆಯಿಂದ ಬಡಾವಣೆಯ ಮಹಿಳೆಯರು, ಯುವತಿಯರು ಹಾಗೂ ಬಾಲಕಿಯರಿಗೆ ತೊಂದರೆಯಾಗುತ್ತಿದೆ. ಹಾಸ್ಟೆಲ್ನಲ್ಲಿ ಸಮರ್ಪಕ ಮೇಲ್ವಿಚಾರಣೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ನಿಯಂತ್ರಣವಿಲ್ಲದೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದರು.
ಹಾಸ್ಟೆಲ್ ವಾರ್ಡನ್ ಸಮರ್ಪಕವಾಗಿ ಲಭ್ಯವಿರುವುದಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ವಿದ್ಯಾರ್ಥಿಗಳ ವರ್ತನೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹಾಸ್ಟೆಲ್ನ್ನು ಶಂಕರ ವಿಹಾರ ಬಡಾವಣೆಯಿಂದ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಮಹಿಳೆಯರು ಆಗ್ರಹಿಸಿದರು. ಘಟನೆ ಹಿನ್ನೆಲೆಯಲ್ಲಿ ಮಹಿಳೆಯರು ಹಾಸ್ಟೆಲ್ ಆವರಣದಲ್ಲಿ ಪ್ರತಿಭಟಿಸಿ, ಸ್ಥಳೀಯ ಹೆಣ್ಣುಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಮಧ್ಯೆ, ಆರೋಪಿತ ವಿದ್ಯಾರ್ಥಿಗೆ ಮಹಿಳೆಯರು ಕಪಾಳಮೋಕ್ಷ ಮಾಡುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.






















