SK Home Ad
Home ಸುದ್ದಿ ರಾಜ್ಯ ಬರಪೀಡಿತ ಪ್ರದೇಶ ಘೋಷಣೆಗೆ ಅರ್ಹತೆ ಪಡೆದ 11 ತಾಲೂಕುಗಳು

ಬರಪೀಡಿತ ಪ್ರದೇಶ ಘೋಷಣೆಗೆ ಅರ್ಹತೆ ಪಡೆದ 11 ತಾಲೂಕುಗಳು

0
47

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿಯ ನಿರಂತರ ಪರಿಶೀಲನೆಯ ಭಾಗವಾಗಿ 7 ಜಿಲ್ಲೆಗಳ 11 ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಿಸಲು ಅರ್ಹತೆ ಪಡೆದಿದ್ದು, ಈ ತಾಲೂಕುಗಳಲ್ಲಿ ಬೆಳೆ ನಷ್ಟದ ಕುರಿತು ಸ್ಥಳ ಪರಿಶೀಲನೆ (ಗ್ರೌಂಡ್‌ ಟ್ರೂಥಿಂಗ್‌) ನಡೆಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೆ. 22ರಂದು ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಜೂನ್‌ 1ರಿಂದ ಸೆ. 21ರವರೆಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನಡೆಸಿದ ಸಮಗ್ರ ಬರ ಮೌಲ್ಯಮಾಪನದ ಆಧಾರದ ಮೇಲೆ 11 ತಾಲೂಕುಗಳು ಸ್ಥಳ ಪರಿಶೀಲನೆಗೆ ಅರ್ಹತೆ ಪಡೆದಿವೆ.

ಬರ ನಿರ್ವಹಣಾ ಕೈಪಿಡಿ-2020ರಲ್ಲಿ ನಿಗದಿಪಡಿಸಿರುವ ಮಾನದಂಡಗಳ ಅನ್ವಯ ಈ ಅರ್ಹತೆ ನಿರ್ಧರಿಸಲಾಗಿದೆ. ಈ 11 ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ, ಬೆಳೆ ನಷ್ಟದ ಪ್ರಮಾಣವನ್ನು ಆಧರಿಸಿ ಬರಪೀಡಿತ ತಾಲೂಕುಗಳೆಂದು ಘೋಷಿಸುವ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಬೆಳೆ ನಷ್ಟ ಶೇ. 33ಕ್ಕಿಂತ ಹೆಚ್ಚಿದ್ದರೆ ಬರ ಘೋಷಣೆ: ಸ್ಥಳ ಪರಿಶೀಲನೆಯಲ್ಲಿ ಅಂದಾಜು ಮಾಡಲಾದ ಬೆಳೆ ನಷ್ಟ ಶೇ. 33 ಅಥವಾ ಅದಕ್ಕಿಂತ ಹೆಚ್ಚಿದ್ದರೆ ತಾಲೂಕು ಬರಪೀಡಿತ ಎಂದು ಘೋಷಿಸಲು ಅರ್ಹವಾಗಲಿದೆ. ಬೆಳೆ ನಷ್ಟ ಶೇ. 50ಕ್ಕಿಂತ ಹೆಚ್ಚಿದ್ದರೆ ಅದನ್ನು ತೀವ್ರ ಬರ ಎಂದು ವರ್ಗೀಕರಿಸಬಹುದಾಗಿದೆ.

ಸ್ಥಳ ಪರಿಶೀಲನೆಯ ವೇಳೆ ಶೇ. 50ಕ್ಕಿಂತ ಹೆಚ್ಚಿನ ಬೆಳೆ ನಷ್ಟ ದಾಖಲಾಗುವ ಪ್ರಮಾಣವನ್ನು ಆಧರಿಸಿ ಬರದ ತೀವ್ರತೆಯನ್ನು ನಿರ್ಧರಿಸಲಾಗುತ್ತದೆ. ಶೇ. 80 ಅಥವಾ ಅದಕ್ಕಿಂತ ಹೆಚ್ಚು ಪರಿಶೀಲನೆಗಳಲ್ಲಿ ಶೇ. 50ಕ್ಕಿಂತ ಹೆಚ್ಚಿನ ಬೆಳೆ ನಷ್ಟ ಕಂಡುಬಂದರೆ, ಮಧ್ಯಮ ಬರವನ್ನು ತೀವ್ರ ಬರವಾಗಿ ಮೇಲ್ದರ್ಜೆಗೇರಿಸುವ ಅವಕಾಶವೂ ಸರ್ಕಾರಕ್ಕಿದೆ.

ಮೊಬೈಲ್‌ ಆ್ಯಪ್‌ ಮೂಲಕ ಪರಿಶೀಲನೆ: ಸ್ಥಳ ಪರಿಶೀಲನಾ ಕಾರ್ಯವನ್ನು ಡಿಪಿಎಆರ್‌ (ಇ-ಆಡಳಿತ) ಅಭಿವೃದ್ಧಿಪಡಿಸಿರುವ ‘ಕ್ರಾಪ್‌ ಲಾಸ್‌ ಜಿಟಿ’ ಮೊಬೈಲ್‌ ಆ್ಯಪ್‌ ಮೂಲಕ ನಡೆಸಲಾಗುತ್ತದೆ. ಬೆಳೆ ವಿವರ, ನಷ್ಟದ ಪ್ರಮಾಣ, ಸ್ಥಳ ಗುರುತಿನ ಛಾಯಾಚಿತ್ರಗಳು, ಜಿಪಿಎಸ್‌ ಮಾಹಿತಿ, ಜಮೀನು ಹಾಗೂ ಮಾಲೀಕತ್ವದ ವಿವರಗಳನ್ನು ಆ್ಯಪ್‌ನಲ್ಲಿ ದಾಖಲಿಸಲಾಗುತ್ತದೆ.

ಸೆ. 24, 25ರಂದು ಕ್ಷೇತ್ರ ಪರಿಶೀಲನೆ: 11 ತಾಲೂಕುಗಳ ಸ್ಥಳ ಪರಿಶೀಲನೆಗೆ ಸರ್ಕಾರ ವೇಳಾಪಟ್ಟಿಯನ್ನೂ ನಿಗದಿಪಡಿಸಿದೆ.
ಸೆ. 22: ಸ್ಥಳ ಪರಿಶೀಲನೆ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿಕೆ
ಸೆ. 23: ಬೆಳೆಗಳ ಆಯ್ಕೆ, ಪರಿಶೀಲನಾ ತಂಡಗಳ ರಚನೆ ಹಾಗೂ ಗ್ರಾಮಗಳ ಆಯ್ಕೆ
ಸೆ. 24 ಮತ್ತು 25: ಕ್ಷೇತ್ರ ಮಟ್ಟದಲ್ಲಿ ಸ್ಥಳ ಪರಿಶೀಲನೆ
ಸೆ. 28: ಪರಿಶೀಲನೆ ಪೂರ್ಣಗೊಳಿಸಿ ವರದಿ ಸಲ್ಲಿಕೆ

ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ನಿಗದಿತ ಅವಧಿಯಲ್ಲಿ ಪರಿಶೀಲನೆ ಪೂರ್ಣಗೊಳಿಸಿ, ಬರ ನಿರ್ವಹಣಾ ಕೈಪಿಡಿಯಲ್ಲಿರುವ ನಿಯಮಗಳಂತೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಖಾರೀಫ್‌ ಹಂಗಾಮು ಮುಗಿಯುವವರೆಗೆ ಬರ ಪರಿಶೀಲನೆ: ರಾಜ್ಯದಲ್ಲಿ ಬರ ಪರಿಸ್ಥಿತಿಯ ಮೌಲ್ಯಮಾಪನ ನಿರಂತರ ಪ್ರಕ್ರಿಯೆಯಾಗಿದ್ದು, ಖಾರೀಫ್‌ 2026ರ ಹಂಗಾಮು ಮುಗಿಯುವವರೆಗೆ ಕೆಎಸ್‌ಎನ್‌ಡಿಎಂಸಿ ವಾರಕ್ಕೊಮ್ಮೆ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ. ಮುಂದಿನ ವಾರಗಳ ಮೌಲ್ಯಮಾಪನದಲ್ಲಿ ಅರ್ಹತೆ ಪಡೆಯುವ ತಾಲೂಕುಗಳಲ್ಲೂ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ.

ಈ ಹಿಂದೆ ಮೂರು ಹಂತಗಳಲ್ಲಿ ನಡೆದ ಸ್ಥಳ ಪರಿಶೀಲನೆಯ ಆಧಾರದ ಮೇಲೆ ಒಟ್ಟು 177 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಇದೀಗ ನಾಲ್ಕನೇ ಹಂತದಲ್ಲಿ 11 ತಾಲೂಕುಗಳು ಸ್ಥಳ ಪರಿಶೀಲನೆಗೆ ಅರ್ಹತೆ ಪಡೆದಿವೆ.