ಸಂ.ಕ.ಸಮಾಚಾರ ಮಂಡ್ಯ: ಆದಾಯದ ಮೂಲಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಹಾಸ್ಟೆಲ್ ಅಧೀಕ್ಷಕ ಶಿವರಾಜು ಅವರಿಗೆ ಸೇರಿದ ಮನೆ ಹಾಗೂ ಫಾರ್ಮ್‌ಹೌಸ್ ಮೇಲೆ ಮಂಡ್ಯ ಲೋಕಾಯುಕ್ತ ಪೊಲೀಸರು ಮಂಗಳವಾರ ಮುಂಜಾನೆ ದಿಢೀರ್ ಶೋಧ ನಡೆಸಿದ್ದಾರೆ.
ಮದ್ದೂರಿನ ಕೊಲ್ಲಿ ವೃತ್ತದ ಸಮೀಪದ ವಿನಾಯಕ ಬಡಾವಣೆಯಲ್ಲಿರುವ ಶಿವರಾಜು ಅವರ ಮನೆ ಹಾಗೂ ಫಾರ್ಮ್‌ಹೌಸ್ ಸೇರಿದಂತೆ ಎರಡು ಸ್ಥಳಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಶಿವರಾಜು ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿ ಸೇವೆ ಸಲ್ಲಿಸಿದ್ದು, ಸೋಮನಹಳ್ಳಿ ಹಾಗೂ ಬೆಸಗರಹಳ್ಳಿ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ತಿಂಗಳಷ್ಟೇ ಅವರು ಸೇವೆಯಿಂದ ನಿವೃತ್ತರಾಗಿದ್ದರು. ಅವರ ವಿರುದ್ಧ ದಾಖಲಾಗಿದ್ದ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಈ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಫಾರ್ಮ್‌ಹೌಸ್‌ನಲ್ಲಿ ಹಾಸ್ಟೆಲ್ ಸಾಮಗ್ರಿ ಪತ್ತೆ : ಶೋಧದ ವೇಳೆ ಶಿವರಾಜು ಅವರ ಫಾರ್ಮ್‌ಹೌಸ್‌ನಲ್ಲಿ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ಪುಸ್ತಕಗಳು, ಬೆಡ್‌ಶೀಟ್‌ಗಳು ಹಾಗೂ ಇತರ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ಮದ್ಯದ ಬಾಟಲಿಗಳು ಸೇರಿದಂತೆ ಇತರ ವಸ್ತುಗಳೂ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಈ ಸಾಮಗ್ರಿಗಳು ಯಾವ ಸಂದರ್ಭದಲ್ಲಿ ಫಾರ್ಮ್‌ಹೌಸ್‌ಗೆ ಬಂದವು, ಅವುಗಳ ಮೂಲವೇನು ಹಾಗೂ ಅವು ಸರ್ಕಾರಿ ಹಾಸ್ಟೆಲ್‌ಗಳಿಗೆ ಸಂಬಂಧಿಸಿದ್ದೇ ಎಂಬುದರ ಕುರಿತು ತನಿಖೆ ಮುಂದುವರಿಯುವ ಸಾಧ್ಯತೆಯಿದೆ.
₹2.71 ಕೋಟಿಗೂ ಅಧಿಕ ಆಸ್ತಿ ಪತ್ತೆ? : ಲೋಕಾಯುಕ್ತ ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಳಿ ವೇಳೆ ಶಿವರಾಜು ಅವರ ಆದಾಯದ ಮೂಲಕ್ಕೆ ಹೋಲಿಸಿದರೆ ಸುಮಾರು ₹2.71 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿರುವುದಾಗಿ ಅಂದಾಜಿಸಲಾಗಿದೆ.
ಶೋಧದಲ್ಲಿ ಸುಮಾರು ₹2.16 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ. ಇದರಲ್ಲಿ ಐದು ನಿವೇಶನಗಳು, ಐದು ಕಟ್ಟಡಗಳು ಹಾಗೂ ಸುಮಾರು ಆರು ಎಕರೆ ಕೃಷಿ ಜಮೀನು ಸೇರಿವೆ. ಕಟ್ಟಡಗಳ ಪೈಕಿ ಎರಡು ವಾಣಿಜ್ಯ ಸಂಕೀರ್ಣಗಳು ಹಾಗೂ ಫಾರ್ಮ್‌ಹೌಸ್ ಕೂಡ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚರಾಸ್ತಿಗಳ ಪೈಕಿ ಸುಮಾರು ₹2.50 ಲಕ್ಷ ನಗದು, ಅಂದಾಜು ₹33.80 ಲಕ್ಷ ಮೌಲ್ಯದ 600 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳು, ಸುಮಾರು ₹15 ಲಕ್ಷ ಮೌಲ್ಯದ ಎರಡು ಕಾರುಗಳು ಸೇರಿದಂತೆ ಬ್ಯಾಂಕ್ ಠೇವಣಿ, ಭೂ ಅಭಿವೃದ್ಧಿ ವೆಚ್ಚ ಹಾಗೂ ಇತರ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ವಿವಿಧ ಆಸ್ತಿ ಮತ್ತು ಹಣಕಾಸು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಶಿವರಾಜು ಅವರ ಆಸ್ತಿಗಳ ಮೂಲ, ಆದಾಯ ಹಾಗೂ ಖರ್ಚಿನ ವಿವರಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಆದಾಯಕ್ಕೂ ಮೀರಿದ ಆಸ್ತಿ ಹೊಂದಿರುವ ಆರೋಪದ ಕುರಿತು ನಡೆದಿರುವ ಈ ಶೋಧ ತನಿಖೆಯ ಹಂತದಲ್ಲಿದ್ದು, ಪತ್ತೆಯಾಗಿರುವ ಆಸ್ತಿಗಳ ಮೌಲ್ಯ ಮತ್ತು ಅವುಗಳ ಮೂಲದ ಕುರಿತು ಮುಂದಿನ ಪರಿಶೀಲನೆಯ ಬಳಿಕವೇ ಅಂತಿಮ ಮಾಹಿತಿ ಸ್ಪಷ್ಟವಾಗಲಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















