ಬೆಂಗಳೂರು: “ಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೆಪಿಎಸ್‌ಸಿಯಲ್ಲಿ ಖದೀಮರು ಸೇರಿಕೊಂಡಿದ್ದಾರೆ. ನಾವು ನಂಬಿಕೆ ಇಟ್ಟು ಆಯ್ಕೆ ಮಾಡಿದ ಅಧಿಕಾರಗಳು ಹೀಗೆಲ್ಲಾ ಮಾಡುತ್ತಿದ್ದಾರೆ. ಅಲ್ಲಿರುವ ಸದಸ್ಯರು ಅಂಗಡಿಯನ್ನೇ ತೆರೆದಿದ್ದಾರೆ. ನಮ್ಮ ಪೊಲೀಸ್ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಒಂದು ದಿನ ಎಲ್ಲವೂ ಹೊರಗೆ ಬರುತ್ತದೆ” ಎಂದರು.
ತನಿಖಾಧಿಕಾರಿಗಳ ನೇಮಕದ ಸ್ವಾತಂತ್ರ್ಯ ನಮಗೆ ಕೊಡಬೇಕಿತ್ತು: “ಹೈಕೋರ್ಟ್ ಎಸ್‌ಐಟಿ ರಚನೆಗೆ ನಿರ್ದೇಶನ ನೀಡಿರುವುದನ್ನು ಸ್ವಾಗತಿಸುತ್ತೇನೆ. ಇಡಿ ಕೂಡ ತನಿಖೆ ಮಾಡುತ್ತಿದೆ. ಆದರೆ, ನಮ್ಮ ಪೊಲೀಸ್ ಇಲಾಖೆಯೂ ತನಿಖೆಯನ್ನು ಬಹಳ ಚೆನ್ನಾಗಿ ನಡೆಸುತ್ತಿದೆ. ನ್ಯಾಯಾಲಯ ಅಗತ್ಯವಿದ್ದರೆ ನಮ್ಮ ಪೊಲೀಸ್ ಇಲಾಖೆಯ ತನಿಖೆಯ ವೈಖರಿಯ ಉಸ್ತುವಾರಿ ನೋಡಬಹುದಿತ್ತು. ನ್ಯಾಯಾಲಯ ಎಸ್‌ಐಟಿ ತನಿಖೆಗೆ ನಿರ್ದೇಶಿಸಿರುವುದು ಸರಿ. ಆದರೆ, ತನಿಖಾಧಿಕಾರಿಗಳ ನೇಮಕದ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರಕ್ಕೆ ಕೊಡಬೇಕಿತ್ತು. ಈ ಬಗ್ಗೆ ದೆಹಲಿ, ಬೇರೆ ಬೇರೆ ರಾಜ್ಯಗಳಿಂದ ನಮಗೆ ಕರೆ ಬಂದಿತ್ತು. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇನೆ” ಎಂದು ಹೇಳಿದರು.
“ನಮಗೆ ಮಕ್ಕಳ ಭವಿಷ್ಯ ಮುಖ್ಯ. ಇದೇ ಕಾರಣಕ್ಕೆ ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ ಕೆಪಿಎಸ್‌ಸಿಯಲ್ಲಿದ್ದ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಿದ್ದರು. ನಾವು ನಂಬಿಕೆ ಇಟ್ಟು, ಪಾರದರ್ಶಕವಾಗಿ ಆಯ್ಕೆ ಮಾಡಿ ಅಧಿಕಾರಿಗಳನ್ನು ಕಳುಹಿಸಿದರೆ ಅವರೂ ಹೀಗೆ ಮಾಡುತ್ತಾರೆ” ಎಂದರು.
“ನಾನು ಇಂಧನ ಸಚಿವನಾಗಿದ್ದಾಗ 22 ಸಾವಿರ ಮಂದಿ ಲೈನ್‌ಮ್ಯಾನ್, ಎಂಜಿನಿಯರ್‌ಗಳ ಹುದ್ದೆ ತುಂಬಿದ್ದೇನೆ. ಬಹಳ ಜಾಗೃತನಾಗಿ ಈ ಕೆಲಸ ಮಾಡಿದ್ದೇನೆ. ಅದಕ್ಕೂ ಮೊದಲು ಖಾಲಿ ಪೇಪರ್‌ನಲ್ಲಿ ಬರೆಸುವ ಭ್ರಷ್ಟ ಸಂಪ್ರದಾಯ ಇತ್ತು. ಆದರೆ ನಾನು ಅದಕ್ಕೆಲ್ಲಾ ಅವಕಾಶ ಕೊಡಲಿಲ್ಲ” ಎಂದರು.



















