SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಡಿಜೆ ಸೌಂಡ್‌ಗೆ ಯುವಕರ ಸ್ಟೆಪ್‌, ಡೊಳ್ಳಿನ ನಾದಕ್ಕೆ ಭಕ್ತರ ಕುಣಿತ; ದಾವಣಗೆರೆಯಲ್ಲಿ ಅದ್ದೂರಿ ಗಣೇಶ ವಿಸರ್ಜನೆ

ಡಿಜೆ ಸೌಂಡ್‌ಗೆ ಯುವಕರ ಸ್ಟೆಪ್‌, ಡೊಳ್ಳಿನ ನಾದಕ್ಕೆ ಭಕ್ತರ ಕುಣಿತ; ದಾವಣಗೆರೆಯಲ್ಲಿ ಅದ್ದೂರಿ ಗಣೇಶ ವಿಸರ್ಜನೆ

0
62

ದಾವಣಗೆರೆ: ಒಂದು ಕಡೆ ಕಿವಿಗಡಚಿಕ್ಕುವ ಡಿಜೆ ಸದ್ದು… ಮತ್ತೊಂದೆಡೆ ಲಯಬದ್ಧ ಡೊಳ್ಳಿನ ನಾದ… ಆಗಸದತ್ತ ಚಾಚಿ ನರ್ತಿಸಿದ ನಂದಿಕೋಲುಗಳು… ಭಗವಾಧ್ವಜ ಹಿಡಿದು ಹೆಜ್ಜೆ ಹಾಕಿದ ಯುವಪಡೆ… ರಸ್ತೆಯ ಇಕ್ಕೆಲಗಳಲ್ಲಿ ಗಣೇಶನ ದರ್ಶನಕ್ಕೆ ಕಾದು ನಿಂತಿದ್ದ ಭಕ್ತಸಾಗರ… ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾದ ವಿನೋಬನಗರ ಮಂಗಳವಾರ ಅದ್ದೂರಿ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಮಿಂದೆದ್ದಿತು.

ವಿನೋಬನಗರದ 2ನೇ ಕ್ರಾಸ್‌ನಲ್ಲಿ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯ 34ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಯ ವಿಸರ್ಜನಾ ಶೋಭಾಯಾತ್ರೆ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ನೆರವೇರಿತು.

ಗಣಪತಿ ದೇಗುಲದ ಬಳಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಯ ವಿಸರ್ಜನಾ ಮೆರವಣಿಗೆ ಮಧ್ಯಾಹ್ನ 2.45ಕ್ಕೆ ಆರಂಭವಾಯಿತು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು. ಧೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹಾಗೂ ಪಾಲಿಕೆ ಮಾಜಿ ಸದಸ್ಯ ಎ. ನಾಗರಾಜ್ ಜಿಲ್ಲಾಧಿಕಾರಿಗೆ ಸಾಥ್ ನೀಡಿದರು.

ನಾದಕ್ಕೆ ಹೆಜ್ಜೆ ಹಾಕಿದ ಯುವಪಡೆ: ಮೆರವಣಿಗೆಯ ಮುಂಭಾಗದಲ್ಲಿ ಡಿಜೆ ವಾಹನ ಸಾಗುತ್ತಿದ್ದಂತೆ ಯುವಕರ ಉತ್ಸಾಹ ಮುಗಿಲು ಮುಟ್ಟಿತ್ತು. ಭಗವಾಧ್ವಜ ಹಿಡಿದ ಯುವಕರು ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ‘ಜೈ ಶ್ರೀರಾಮ್’ ಘೋಷಣೆಗಳು ಮೊಳಗಿದವು. ಡೊಳ್ಳು ಕುಣಿತ, ನಂದಿ ಧ್ವಜ ಕುಣಿತ ಹಾಗೂ ಸಮಾಳದ ನಾದಕ್ಕೆ ಯುವಕರು, ಭಕ್ತರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಗಣೇಶಮೂರ್ತಿಯ ಅಲಂಕಾರ, ಹೂವಿನ ಸಿಂಗಾರ ಹಾಗೂ ಶೋಭಾಯಾತ್ರೆಯ ವೈಭವ ಭಕ್ತರ ಕಣ್ಮನ ಸೆಳೆಯಿತು. ಮೆರವಣಿಗೆ ಸಾಗುವ ಮಾರ್ಗವನ್ನು ಸ್ವಚ್ಛಗೊಳಿಸಿ ಸಜ್ಜಾಗಿದ್ದ ಜನರು ಮನೆಗಳ ಮುಂಭಾಗ ಹಾಗೂ ಕಟ್ಟಡಗಳ ಮೇಲಿನಿಂದ ಗಣೇಶಮೂರ್ತಿಯ ದರ್ಶನ ಪಡೆದು ಪುನೀತರಾದರು.

ಮಸೀದಿ ಬಳಿ ಸೌಹಾರ್ದದ ನೋಟ: ಮೆರವಣಿಗೆ ಮಸೀದಿ ಸಮೀಪ ಸಾಗಿದಾಗ ಅಲ್ಲಿದ್ದ ಮುಸ್ಲಿಂ ಸಮುದಾಯದವರು ಗಣೇಶಮೂರ್ತಿಗೆ ಭಕ್ತಿಯಿಂದ ಗೌರವ ಸಲ್ಲಿಸಿದ್ದು ಗಮನ ಸೆಳೆಯಿತು. ಪರಸ್ಪರ ಗೌರವ ಹಾಗೂ ಸೌಹಾರ್ದದ ಈ ಕ್ಷಣ ಮೆರವಣಿಗೆಯ ವಿಶೇಷ ದೃಶ್ಯವಾಗಿ ಕಂಡುಬಂತು.

ಮಸೀದಿ ಸುತ್ತಮುತ್ತ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಿಗಿ ಭದ್ರತೆ ಕೈಗೊಂಡಿದ್ದರು. ಸಿಸಿ ಕ್ಯಾಮೆರಾಗಳ ಮೂಲಕವೂ ನಿಗಾ ವಹಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು.