SK Home Ad
Home ನಮ್ಮ ಜಿಲ್ಲೆ ಗದಗ ಗದಗ ಬರಪೀಡಿತ ತಾಲೂಕು ಘೋಷಣೆಗೆ ಡೆಡ್‌ಲೈನ್; ಎಚ್.ಕೆ. ಪಾಟೀಲ್ ರಾಜೀನಾಮೆ ಎಚ್ಚರಿಕೆ

ಗದಗ ಬರಪೀಡಿತ ತಾಲೂಕು ಘೋಷಣೆಗೆ ಡೆಡ್‌ಲೈನ್; ಎಚ್.ಕೆ. ಪಾಟೀಲ್ ರಾಜೀನಾಮೆ ಎಚ್ಚರಿಕೆ

0
3

ಗದಗ: ಮುಂಗಾರು ಮಳೆ ಇಲ್ಲದೆ ಶೇ. 80ರಷ್ಟು ಬೆಳೆ ಹಾನಿಯಾಗಿರುವ ಗದಗ ತಾಲೂಕು ಅಕ್ಟೋಬರ್ 10ರೊಳಗೆ ಬರಪೀಡಿತ ತಾಲೂಕೆಂದು ಘೋಷಿಸಬೇಕು, ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್‌ನ ಹಿರಿಯ ನಾಯಕ, ಶಾಸಕ ಎಚ್.ಕೆ. ಪಾಟೀಲ್ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಮುಳಗುಂದದಲ್ಲಿ ಮಾತನಾಡಿದ ಅವರು, ಗದಗ ತಾಲೂಕಿನಲ್ಲಿ ಶೇ. 49ರಷ್ಟು ಮಳೆ ಕೊರತೆಯಾಗಿದ್ದರೂ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಗದಗ ಬರಪೀಡಿತ ಪ್ರದೇಶ ಎಂಬುದು ಅಧಿಕಾರಿಗಳ ವರದಿಗಳಿಂದಲೂ ಸ್ಪಷ್ಟವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಪರಿಸ್ಥಿತಿ ಸರ್ಕಾರದ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಕದಾಂಪುರದಿಂದ ಕುರ್ತಕೋಟಿವರೆಗೆ ಬೆಳೆ ಹಾನಿ ಖುದ್ದು ಪರಿಶೀಲಿಸಿದ್ದಾರೆ. ಇಷ್ಟಾದರೂ ಗದಗ ತಾಲೂಕು ಬರಪೀಡಿತ ಎಂದು ಘೋಷಿಸದಿರುವುದು ಏಕೆ? ಎಂದು ಪ್ರಶ್ನಿಸಿದರು.

‘ಯಾರು ಅಡ್ಡಿಯಾಗಿದ್ದಾರೆ?’ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಎಚ್.ಕೆ. ಪಾಟೀಲ್ ಆಗ್ರಹಿಸಿದರು. ವಿಧಾನಸಭೆಯ ಮೂಲಕ ರಾಜ್ಯ ಸರ್ಕಾರಕ್ಕೆ ಅಕ್ಟೋಬರ್ 10ರವರೆಗೆ ಗಡುವು ನೀಡುವುದಾಗಿ ತಿಳಿಸಿದ ಅವರು, ಅಷ್ಟರೊಳಗೆ ಗದಗ ತಾಲೂಕು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು.