ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಟ್ಟಿಹಾಳ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಸುಖದೇವ ಚಲವಾದಿ (30) ಹಾಗೂ ರಾಜು ಚಲವಾದಿ (40) ಗಾಯಗೊಂಡಿದ್ದಾರೆ.
ಮಟ್ಟಿಹಾಳ ಗ್ರಾಮದ ಪೆಟ್ರೋಲ್ ಬಂಕ್ಗೆ ಸುಖದೇವ ಚಲವಾದಿ ಅವರು ತಮ್ಮ ಸ್ನೇಹಿತ ರಾಜು ಚಲವಾದಿ ಅವರೊಂದಿಗೆ ತೆರಳಿದ್ದರು. ಈ ವೇಳೆ ಪೆಟ್ರೋಲ್ ಬಂಕ್ ಮಾಲೀಕ ಸಂಗಪ್ಪ ಪೂಜಾರಿ (48) ಹಾಗೂ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ. ವಾಗ್ವಾದದ ಬಳಿಕ ಸಂಗಪ್ಪ ಪೂಜಾರಿ ಅವರು ತಮ್ಮ ಪರವಾನಗಿ ಹೊಂದಿರುವ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.
ಈ ವೇಳೆ ಸುಖದೇವ ಅವರಿಗೆ ಗುಂಡೇಟಿನಿಂದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಾಜು ಚಲವಾದಿ ಅವರಿಗೂ ಗಾಯಗಳಾಗಿವೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಸಂಗಪ್ಪ ಪೂಜಾರಿ ಅವರನ್ನು ವಶಕ್ಕೆ ಪಡೆದಿದ್ದಾರೆ.





















