SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಬರಪೀಡಿತ ತಾಲೂಕುಗಳ ಸಂಖ್ಯೆ 200 ದಾಟುವ ಸಾಧ್ಯತೆ: ಆತಂಕ ಬೇಡ ಎಂದ ಪರಮೇಶ್ವರ್

ಬರಪೀಡಿತ ತಾಲೂಕುಗಳ ಸಂಖ್ಯೆ 200 ದಾಟುವ ಸಾಧ್ಯತೆ: ಆತಂಕ ಬೇಡ ಎಂದ ಪರಮೇಶ್ವರ್

0
51

ದಾವಣಗೆರೆ: ಕೇಂದ್ರ ಸರ್ಕಾರದ ಮಾರ್ಗಸೂಚಿ, ಉಪಗ್ರಹ ಚಿತ್ರಗಳು, ಲಭ್ಯವಿರುವ ದತ್ತಾಂಶ ಹಾಗೂ 10 ಮಾನದಂಡಗಳ ಆಧಾರದ ಮೇಲೆ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಹಂತ ಹಂತವಾಗಿ ಘೋಷಿಸಲಾಗುತ್ತಿದೆ ಎಂದು ಕಂದಾಯ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಘೋಷಣೆಯನ್ನು ಒಂದೇ ಬಾರಿಗೆ ಎಲ್ಲ ತಾಲೂಕುಗಳಿಗೂ ಮಾಡಲು ಸಾಧ್ಯವಿಲ್ಲ. ಅರ್ಹತೆ ಪಡೆಯುವ ತಾಲೂಕುಗಳನ್ನು ಹಂತ ಹಂತವಾಗಿ ಘೋಷಿಸಲಾಗುವುದು. ಮುಂಗಾರು ಮುಗಿಯುವವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದರು.

ಈಗಾಗಲೇ ಮೊದಲ ಹಂತದಲ್ಲಿ 101 ಹಾಗೂ ಎರಡನೇ ಹಂತದಲ್ಲಿ 24 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ 52 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ಪೂರ್ಣಗೊಳಿಸಿ ಘೋಷಣೆ ಮಾಡಲಾಗುವುದು. ಬಳಿಕ ಮತ್ತೆ ಸುಮಾರು 50 ತಾಲೂಕುಗಳನ್ನು ಘೋಷಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.

ಒಟ್ಟಾರೆ ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಜಗಳೂರು ಸೇರಿದಂತೆ ಯಾವುದೇ ತಾಲೂಕಿನ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು.

ವಿಶೇಷ ಅಧಿವೇಶನದಲ್ಲಿ ಚರ್ಚೆ: ರಾಜ್ಯದ ಬರ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಸಂದರ್ಭದಲ್ಲಿ ವಿರೋಧ ಪಕ್ಷಗಳೊಂದಿಗೆ ಚರ್ಚಿಸಿ, ನಿಯೋಗದೊಂದಿಗೆ ದೆಹಲಿಗೆ ತೆರಳಿ ಎನ್‌ಡಿಆರ್‌ಎಫ್‌ ಅಡಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ರೈತರ ಸಾಲಮನ್ನಾ ಮಾಡುವಂತೆಯೂ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದರು.

ಈಗಾಗಲೇ 101 ತಾಲೂಕುಗಳಲ್ಲಿ ಸುಮಾರು ₹18,000 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಮೊದಲ ಹಂತದಲ್ಲಿ ₹3,500 ಕೋಟಿ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ₹72,000 ಕೋಟಿ ರೈತರ ಸಾಲಮನ್ನಾ ಮಾಡಲಾಗಿತ್ತು. ಅದೇ ರೀತಿಯಲ್ಲಿ ಈ ಬಾರಿಯೂ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಸಚಿವರು ಆಶಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಬಿಡುಗಡೆ ವಿಚಾರದಲ್ಲಿ ತಾರತಮ್ಯವಾಗುತ್ತಿದೆ ಎಂಬ ಆರೋಪವನ್ನೂ ಸಚಿವರು ಮಾಡಿದರು.

ಸಿದ್ದರಾಮಯ್ಯ ಪ್ರತಿಮೆ ತೆರವು: ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸೂಕ್ತ ಅನುಮತಿ ಪಡೆಯದೆ ಹಾಗೂ ನಿಯಮಗಳನ್ನು ಪಾಲಿಸದ ಕಾರಣ ಪಾಲಿಕೆ ಅಧಿಕಾರಿಗಳು ಪ್ರತಿಮೆ ತೆರವುಗೊಳಿಸಿದ್ದಾರೆ ಎಂದು ತಿಳಿಸಿದರು. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಈ ವಿಚಾರದಲ್ಲಿ ಮುಂದಿನ ನಿರ್ಧಾರವನ್ನು ಸ್ಥಳೀಯ ಪಾಲಿಕೆಗೆ ಬಿಡಲಾಗಿದೆ ಎಂದರು.