ಬೆಂಗಳೂರು: ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ನಡೆಯಲಿರುವ ಚೆಸ್ ಒಲಿಂಪಿಯಾಡ್ 2026ಕ್ಕೆ ಅಧಿಕೃತ ಕೌಂಟ್‌ಡೌನ್ ಆರಂಭವಾಗಿದ್ದು, ಇದರ ಅಂಗವಾಗಿ ಒಲಿಂಪಿಯಾಡ್‌ನ ಸಾಂಪ್ರದಾಯಿಕ ಜ್ಯೋತಿಯನ್ನು ಫಿಡೆ ಮಧ್ಯಂತರ ಅಧ್ಯಕ್ಷ ಹಾಗೂ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಮತ್ತು ಅಖಿಲ ಭಾರತ ಚೆಸ್ ಫೆಡರೇಷನ್ (AICF) ಅಧ್ಯಕ್ಷ ನಿತಿನ್ ನರಂಗ್ ಅವರು 2026ರ ಕ್ಯಾಂಡಿಡೇಟ್ಸ್ ಟೂರ್ನಿಯ ವಿಜೇತ ಹಾಗೂ ಉಜ್ಬೇಕಿಸ್ತಾನದ ಅಗ್ರ ಆಟಗಾರ ಜಾವೋಖಿರ್ ಸಿಂದರೋವ್ ಅವರಿಗೆ ಹಸ್ತಾಂತರಿಸಿದರು.
ವಿಶ್ವದ ಅತ್ಯಂತ ಪ್ರತಿಷ್ಠಿತ ತಂಡ ಆಧಾರಿತ ಚೆಸ್ ಸ್ಪರ್ಧೆಗಳಲ್ಲಿ ಒಂದಾಗಿರುವ ಚೆಸ್ ಒಲಿಂಪಿಯಾಡ್ ಸೆಪ್ಟೆಂಬರ್ 15ರಿಂದ 27ರವರೆಗೆ ಸಮರ್ಕಂಡ್‌ನಲ್ಲಿ ನಡೆಯಲಿದೆ. ವಿಶ್ವದ ಹಲವು ಪ್ರಮುಖ ಚೆಸ್ ಆಟಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಒಲಿಂಪಿಕ್ ಕ್ರೀಡಾಕೂಟದ ಜ್ಯೋತಿಯ ಮಾದರಿಯಲ್ಲಿ ಚೆಸ್ ಒಲಿಂಪಿಯಾಡ್ ಜ್ಯೋತಿ ಹಸ್ತಾಂತರಿಸುವ ಸಂಪ್ರದಾಯವನ್ನು ಫಿಡೆ 2022ರಲ್ಲಿ ಆರಂಭಿಸಿತ್ತು. ಚೆಸ್ ಕ್ರೀಡೆಯ ಜಾಗತಿಕ ವ್ಯಾಪ್ತಿಯನ್ನು ಪ್ರತಿಬಿಂಬಿಸುವುದು ಹಾಗೂ ಸ್ಪರ್ಧೆಯ ಕುರಿತಾದ ಉತ್ಸಾಹವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
“ಚೆಸ್ ಒಲಿಂಪಿಯಾಡ್ ಜ್ಯೋತಿ ರಾಷ್ಟ್ರಗಳು ಮತ್ತು ತಲೆಮಾರುಗಳನ್ನು ಸಂಪರ್ಕಿಸುವ ಚೆಸ್‌ನ ಶಕ್ತಿಯುತ ಸಂಕೇತವಾಗಿದೆ. 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಈ ಸಂಪ್ರದಾಯಕ್ಕೆ ಚಾಲನೆ ನೀಡಿದ್ದರು. ಚೆಸ್‌ನ ತವರೂರಾದ ಭಾರತದಿಂದ ಉಜ್ಬೇಕಿಸ್ತಾನಕ್ಕೆ ಜ್ಯೋತಿ ಸಾಗುತ್ತಿರುವುದು ವಿಶೇಷ. ಸಮರ್ಕಂಡ್ ಚೆಸ್ ಜಗತ್ತನ್ನು ಸ್ವಾಗತಿಸಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ ಜಾವೋಖಿರ್ ಸಿಂದರೋವ್ ಹಾಗೂ ಉಜ್ಬೇಕಿಸ್ತಾನಕ್ಕೆ ಶುಭ ಹಾರೈಸುತ್ತೇವೆ,” ಎಂದು AICF ಅಧ್ಯಕ್ಷ ನಿತಿನ್ ನರಂಗ್ ಹೇಳಿದರು.
ಭಾರತವು ಓಪನ್ ಹಾಗೂ ಮಹಿಳಾ ವಿಭಾಗಗಳ ಹಾಲಿ ಚಾಂಪಿಯನ್ ಆಗಿದ್ದು, 2026ರಲ್ಲಿಯೂ ಪ್ರಶಸ್ತಿ ಉಳಿಸಿಕೊಳ್ಳುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.






















