SK Home Ad
Home ನಮ್ಮ ಜಿಲ್ಲೆ ಹಾವೇರಿ ‘ಮುಂದಿನ ಜನ್ಮದಲ್ಲಾದರೂ ನಿನ್ನವನಾಗಿ ಹುಟ್ಟುವೆ’ ಎಂದು ಬರೆದು ಯುವಕ ಆತ್ಮಹತ್ಯೆ

‘ಮುಂದಿನ ಜನ್ಮದಲ್ಲಾದರೂ ನಿನ್ನವನಾಗಿ ಹುಟ್ಟುವೆ’ ಎಂದು ಬರೆದು ಯುವಕ ಆತ್ಮಹತ್ಯೆ

0
38

ಹಾವೇರಿ: ಎರಡು ವರ್ಷಗಳ ಕಾಲ ಪ್ರೀತಿಸಿ, ಕೊನೆಗೂ ಕೈಹಿಡಿದ ಪ್ರೇಯಸಿಯನ್ನು ಕಳೆದುಕೊಂಡ ನೋವು ಯುವಕನೊಬ್ಬನ ಬದುಕನ್ನೇ ದುರಂತದತ್ತ ಕೊಂಡೊಯ್ದ ಘಟನೆ ಹಾವೇರಿಯಲ್ಲಿ ನಡೆದಿದೆ.

ದೇವಸ್ಥಾನವೊಂದರಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಿದ್ದ ಯುವಕ, ಪತ್ನಿಯನ್ನು ಆಕೆಯ ಪೋಷಕರು ತಮ್ಮೊಂದಿಗೆ ಕರೆದೊಯ್ದ ಬಳಿಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ಯುವಕನನ್ನು ಹಾವೇರಿಯ ಮಂಜುನಾಥ್ ಅಗಡಿ (24) ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಮಂಜುನಾಥ್, ಇತ್ತೀಚೆಗೆ ಆಕೆಯೊಂದಿಗೆ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದ. ಆದರೆ ಈ ಮದುವೆಗೆ ಯುವತಿಯ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಯುವತಿ ಕಾಣೆಯಾಗಿರುವ ಕುರಿತು ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣವೂ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆದಿತ್ತು. ವಿಚಾರಣೆ ಬಳಿಕ ಯುವತಿಯನ್ನು ಆಕೆಯ ಪೋಷಕರು ತಮ್ಮೊಂದಿಗೆ ಕರೆದೊಯ್ದಿದ್ದರು ಎನ್ನಲಾಗಿದೆ.

ಪ್ರೀತಿಸಿ ಮದುವೆಯಾದ ಪತ್ನಿ ತಮ್ಮಿಂದ ದೂರವಾದ ನೋವನ್ನು ಮಂಜುನಾಥ್‌ಗೆ ಸಹಿಸಲಾಗಲಿಲ್ಲ ಎನ್ನಲಾಗಿದೆ. ಇದೇ ನೋವಿನಲ್ಲಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೂ ಮುನ್ನ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ‘ಮುಂದಿನ ಜನ್ಮ ಅಂತ ಇದ್ದರೆ ನಾನು ನಿನ್ನವನಾಗಿ ಹುಟ್ಟಿಬರುವೆ’ ಎಂಬ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ಸಂದೇಶ ಇದೀಗ ಕುಟುಂಬಸ್ಥರು ಹಾಗೂ ಸ್ನೇಹಿತರ ಮನಕಲಕುವಂತೆ ಮಾಡಿದೆ.

ಪ್ರೀತಿಸಿ, ಮದುವೆಯಾಗಿ, ಒಟ್ಟಿಗೆ ಬದುಕುವ ಕನಸು ಕಂಡಿದ್ದ ಯುವಕನ ಬದುಕು, ಪತ್ನಿ ದೂರವಾದ ಕೆಲವೇ ದಿನಗಳಲ್ಲಿ ದುರಂತ ಅಂತ್ಯ ಕಂಡಿರುವುದು ಇನ್ನಷ್ಟು ನೋವು ತಂದಿದೆ.