SK Home Ad
Home ಸುದ್ದಿ ರಾಜ್ಯ ಗಣಪತಿ ಹಬ್ಬಕ್ಕೆ ನಿರ್ಬಂಧ: ‘ಹಿಂದೂಗಳ ತಂಟೆಗೆ ಹೋದ್ರೆ ಹುಷಾರ್’ ಎಂದ ಆರ್. ಅಶೋಕ್!

ಗಣಪತಿ ಹಬ್ಬಕ್ಕೆ ನಿರ್ಬಂಧ: ‘ಹಿಂದೂಗಳ ತಂಟೆಗೆ ಹೋದ್ರೆ ಹುಷಾರ್’ ಎಂದ ಆರ್. ಅಶೋಕ್!

0
38
File Photo

ಬೆಂಗಳೂರು: ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಿಧಿಸಿರುವ ನಿರ್ಬಂಧಗಳು ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ. ಗಣಪತಿ ಮೆರವಣಿಗೆ, ಮೆರವಣಿಗೆಯ ಮಾರ್ಗ ಹಾಗೂ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ನೀಡಿರುವ ಎಚ್ಚರಿಕೆ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಟಿ. ನರಸೀಪುರದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ್ದ ಇನ್ಸ್‌ಪೆಕ್ಟರ್ ಧನಂಜಯ್, ಪೊಲೀಸರು ನಿಗದಿಪಡಿಸುವ ಮಾರ್ಗದಲ್ಲೇ ಗಣಪತಿ ಮೆರವಣಿಗೆ ನಡೆಸಬೇಕು ಎಂದು ಸೂಚಿಸಿದ್ದರು. ಮಸೀದಿ ಇರುವ ರಸ್ತೆಯಲ್ಲಿ ಮೆರವಣಿಗೆ ನಡೆಸುವುದು, ಅಲ್ಲಿ ಪಟಾಕಿ ಸಿಡಿಸುವುದು ಅಥವಾ ಡಿಜೆ ಹಾಕಿಕೊಂಡು ನಿಲ್ಲುವುದು ಮಾಡಬಾರದು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು. ಅಲ್ಲದೆ, ಮೆರವಣಿಗೆಯ ಮಾರ್ಗವನ್ನು ಮುಂಚಿತವಾಗಿ ಪೊಲೀಸರಿಗೆ ತಿಳಿಸಬೇಕು ಮತ್ತು ಡಿಜೆ ಮಾದರಿಯ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಆರ್. ಅಶೋಕ್, ಗಣಪತಿ ಹಬ್ಬದ ಆಚರಣೆಗೆ ಅನಗತ್ಯ ನಿರ್ಬಂಧ ಹೇರಬಾರದು ಎಂದು ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ. “ಹಿಂದೂಗಳ ತಂಟೆಗೆ ಹೋದರೆ ಹುಷಾರ್. ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರುತ್ತೇನೆ” ಎಂದು ಅವರು ಎಚ್ಚರಿಸಿದ್ದಾರೆ.

ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸುವ ಹಕ್ಕು ಭಕ್ತರಿಗೆ ಇದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೆಸರಿನಲ್ಲಿ ಹಬ್ಬದ ಆಚರಣೆಗೆ ಅತಿಯಾದ ನಿರ್ಬಂಧ ಹೇರಬಾರದು ಎಂಬುದು ಅಶೋಕ್ ಅವರ ನಿಲುವಾಗಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೇ ವೇಳೆ, ಇನ್ಸ್‌ಪೆಕ್ಟರ್ ಧನಂಜಯ್ ಅವರ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಗೌರವಯುತವಾಗಿ ಮತ್ತು ಸಂಯಮದಿಂದ ಮಾತನಾಡಬೇಕು ಎಂದು ಅವರು ಹೇಳಿದ್ದರು.

ಇತ್ತ, ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ರೀತಿಯಲ್ಲಿ ಯಾರೂ ಮಾತನಾಡಬಾರದು ಎಂದು ತಿರುಗೇಟು ನೀಡಿದ್ದಾರೆ. ಹೀಗಾಗಿ ಟಿ. ನರಸೀಪುರ ಗಣೇಶೋತ್ಸವದ ನಿರ್ಬಂಧದ ವಿಚಾರ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ.