ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿಯ ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಮುಂದುವರಿದಿರುವ ನಡುವೆಯೇ, ಒಂದೇ ವಾರದ ಅವಧಿಯಲ್ಲಿ ಇಬ್ಬರ ಮೇಲೆ ಕರಡಿ ದಾಳಿ ನಡೆಸಿರುವ ಘಟನೆಗಳು ವರದಿಯಾಗಿವೆ. ಭಾಮಣಗಿ ಹಾಗೂ ಫಣಸೋಳಿ ಗ್ರಾಮಗಳಲ್ಲಿ ನಡೆದ ಈ ಘಟನೆಗಳು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ.
ಭಾಮಣಗಿ ಗ್ರಾಮದಲ್ಲಿ ಹೊಲದ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿ ಕಚ್ಚಿದ್ದು, ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಫಣಸೋಳಿ ಗ್ರಾಮದಲ್ಲಿಯೂ ಕರಡಿ ದಾಳಿ ನಡೆದಿದೆ.
ರವಿವಾರ ಸಂಜೆ ದನ ಮೇಯಿಸುತ್ತಿದ್ದ ಗವಳಿ ಸಮುದಾಯದ ಅಪ್ಪು ಪಿಂಗಳೆ ಅವರ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದೆ. ಕರಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅವರು ಧೈರ್ಯದಿಂದ ಪ್ರತಿರೋಧಿಸಿದ್ದು, ಕರಡಿಯೊಂದಿಗೆ ಸೆಣಸಾಡಿ ಅದನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಜೋರಾಗಿ ಕೂಗಿಕೊಂಡಾಗ ಸ್ಥಳೀಯರು ಧಾವಿಸಿ ಗಾಯಗೊಂಡಿದ್ದ ಅಪ್ಪು ಪಿಂಗಳೆ ಅವರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಧಾವಿಸಿ ಗಾಯಾಳುವಿನ ಆರೋಗ್ಯ ವಿಚಾರಿಸಿ, ಅಗತ್ಯ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಂಡಿದ್ದಾರೆ.
ಚಿರತೆಗಿಂತ ಕರಡಿ ದಾಳಿಯತ್ತವೂ ಗಮನ ಅಗತ್ಯ: ಕಳೆದೊಂದು ತಿಂಗಳಿನಿಂದ ದಾಂಡೇಲಿ ಸುತ್ತಮುತ್ತ ‘ಚಿರತೆ ಪ್ರತ್ಯಕ್ಷ’ ಎಂಬ ಸುದ್ದಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆಗಳು ಹೆಚ್ಚಾಗಿವೆ. ಆದರೆ ಇದುವರೆಗೆ ಚಿರತೆ ಮನುಷ್ಯರ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿಲ್ಲ. ಮತ್ತೊಂದೆಡೆ, ಕಾಡಂಚಿನ ಗ್ರಾಮಗಳಲ್ಲಿ ಕರಡಿ ದಾಳಿಗೆ ಜನರು ಪ್ರತಿವರ್ಷವೂ ತುತ್ತಾಗುತ್ತಿರುವುದು ಗಮನಾರ್ಹವಾಗಿದೆ.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಿರತೆ ಕಾಣಿಸಿಕೊಂಡಿರುವ ಸುದ್ದಿಗಳಿಗೆ ಹೆಚ್ಚಿನ ಒತ್ತು ನೀಡುವ ಬದಲು, ಕಾಡಂಚಿನ ಗ್ರಾಮಗಳ ಜನರು ಎದುರಿಸುತ್ತಿರುವ ಕರಡಿ ದಾಳಿಯ ಅಪಾಯದ ಕುರಿತು ಜಾಗೃತಿ ಮೂಡಿಸುವುದು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಅಗತ್ಯವಿದೆ.






















