BBK13: ‘ಮಿಥುನ ರಾಶಿ’ ಹಾಗೂ ‘ಪ್ರೇಮಕಾವ್ಯ’ ಧಾರಾವಾಹಿಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ವೈಷ್ಣವಿ ಕೌಂಡಿನ್ಯ, ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಅಖಾಡಕ್ಕೆ ಧುಮುಕಿದ್ದಾರೆ. ಕಿರುತೆರೆಯಲ್ಲಿ ಸದಾ ನಗುತ್ತಾ ರಂಜಿಸುತ್ತಿದ್ದ ಈ ನಟಿ, ತಮ್ಮ ಗ್ಲಾಮರ್ ಪ್ರಪಂಚದ ಹಿಂದಿರುವ ಕಹಿ ಸತ್ಯಗಳು ಹಾಗೂ ಜೀವನದ ಕಷ್ಟದ ದಿನಗಳನ್ನು ಬಿಗ್ ಬಾಸ್ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ವೈಷ್ಣವಿ, “ನಮ್ಮ ಪೋಷಕರಿಗೆ ನಾನು ಒಬ್ಬಳೇ ಮಗಳು. ಮನೆಯಲ್ಲಿ ನಾನು, ಅಮ್ಮ ಹಾಗೂ ಅಜ್ಜಿ ಮಾತ್ರ ಇದ್ದೇವೆ. ನನ್ನ ಅಪ್ಪ-ಅಮ್ಮ ಡಿವೋರ್ಸ್ ಪಡೆದುಕೊಂಡಿದ್ದು, ನಾನು ಇದುವರೆಗೆ ತಂದೆಯ ಮುಖವನ್ನೇ ನೋಡಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕುಟುಂಬದಿಂದ ಬೇರ್ಪಟ್ಟರೂ, ಯಾರ ಬಳಿಯೂ ಕೈಚಾಚದೆ ಸ್ವಂತ ಕಾಲಿನ ಮೇಲೆ ನಿಲ್ಲಲು ಅಪಾರ ಕಷ್ಟಪಟ್ಟಿದ್ದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಈವೆಂಟ್ ಒಂದರಲ್ಲಿ ಮಾಡ್ರನ್ ಉಡುಪಿನಲ್ಲಿ ಭಾಗವಹಿಸಿದ್ದೆ, ಅಲ್ಲಿ ನನ್ನ ವಿಡಿಯೋ ತಪ್ಪು ಆಂಗಲ್‌ನಲ್ಲಿ ಶೂಟ್ ಮಾಡಿ ವೈರಲ್ ಆಗಿತ್ತು. ಈ ಬಗ್ಗೆ ನನಗೆ ತುಂಬಾ ನೋವಾಗಿತ್ತು. ಮುಂದುವರೆದು “ಕಾಮೆಂಟ್‌ಗಳಲ್ಲಿ ಹೆಣ್ಣುಮಕ್ಕಳಿಗೆ ಬಳಸಬಾರದ ಕೆಟ್ಟ ಮಾತುಗಳನ್ನು ಹಾಕಿದ್ದರು. ಇದರಿಂದಾಗಿ ಎರಡು ದಿನ ಮನೆಯಿಂದ ಹೊರಬರಲಾಗದೆ ರಾತ್ರಿಯಿಡೀ ಅತ್ತಿದ್ದೆ” ಎಂದು ಸಂಕಟ ತೋಡಿಕೊಂಡಿದ್ದಾರೆ. ಆದ್ರೆ ಈ ಪ್ರತಿಯೊಂದು ಸವಾಲುಗಳು ತಮ್ಮನ್ನು ಮಾನಸಿಕವಾಗಿ ಮತ್ತಷ್ಟು ಗಟ್ಟಿ ಮಾಡಿವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ.. 16ನೇ ವಯಸ್ಸಿಗೆ ನಟನೆ ಆರಂಭಿಸಿ ‘ಮಿಥುನ ರಾಶಿ’ಯ ಆಟೋ ಚಾಲಕಿ ರಾಶಿ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ವೈಷ್ಣವಿ, ಸೈಕಾಲಜಿ ಮತ್ತು ಜರ್ನಲಿಸಂನಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಕಲಾವಿದೆಯೂ ಆಗಿರುವ ಇವರು, ಜೀವನದ ನೋವು ಹಾಗೂ ನಿರಂತರ ಓಟದ ನಡುವೆ ಮಾನಸಿಕ ರಿಲ್ಯಾಕ್ಸೇಷನ್ ಪಡೆಯಲು ಬಿಗ್ ಬಾಸ್ ಮನೆಗೆ ಬಂದಿರುವುದಾಗಿ ಹೇಳಿದ್ದಾರೆ.






















