ಶಿವಮೊಗ್ಗ: ರೌಡಿಶೀಟರ್ ಕಿರಣ್ ಅಲಿಯಾಸ್ ಕುಳ್ಳಿ ಕಿರಣ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಸೋಮವಾರ ಬೆಳಗ್ಗೆ ಶಿವಮೊಗ್ಗದಲ್ಲಿ ನಡೆದಿದೆ. ಎನ್.ಆರ್.ಪುರ ರಸ್ತೆಯ ಲಿಂಗಾಪುರ ಗ್ರಾಮದ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿ ಉಮೇಶ್ ನಾಯ್ಕ್ (27) ಗಾಯಗೊಂಡಿದ್ದಾನೆ.
ಭಾನುವಾರ ಸಂಜೆ ರಾಮಿನಕೊಪ್ಪದಲ್ಲಿ ಕುಳ್ಳಿ ಕಿರಣ್ (32) ಎಂಬಾತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ತುಂಗಾನಗರ ಪೊಲೀಸರು ಪ್ರಮುಖ ಆರೋಪಿ ಉಮೇಶ್ ನಾಯ್ಕ್‌ನನ್ನು ಬಂಧಿಸಲು ಲಿಂಗಾಪುರಕ್ಕೆ ತೆರಳಿದ್ದರು.
ಈ ವೇಳೆ ಉಮೇಶ್ ನಾಯ್ಕ್ ಪೊಲೀಸ್ ಸಿಬ್ಬಂದಿ ತಮ್ಮಣ್ಣ ಜಂಬಗಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ತುಂಗಾನಗರ ಠಾಣೆ ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಆರೋಪಿ ಪೊಲೀಸರ ಮೇಲೆ ಮತ್ತೆ ದಾಳಿ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ.
ಗುಂಡೇಟಿನಿಂದ ಗಾಯಗೊಂಡ ಉಮೇಶ್ ನಾಯ್ಕ್‌ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ತಮ್ಮಣ್ಣ ಜಂಬಗಿ ಅವರಿಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದೆ. ಏತನ್ಮಧ್ಯೆ, ಕುಳ್ಳಿ ಕಿರಣ್ ಹತ್ಯೆಗೆ ನಿಖರ ಕಾರಣವೇನು ಮತ್ತು ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















