ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಯ ಬಳಿಕ ನಡೆದಿದ್ದ ‘ಶುದ್ಧೀಕರಣ’ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಘಟನೆ ನಡೆದು 24 ದಿನಗಳು ಕಳೆದರೂ ಇದುವರೆಗೆ ಯಾವುದೇ FIR ದಾಖಲಾಗಿಲ್ಲ ಎಂದು ಆಕ್ಷೇಪಿಸಿರುವ ಖರ್ಗೆ, ರಾಜ್ಯಸಭೆಯ ಸಭಾನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಆಗಸ್ಟ್ 8ರಂದು ಖರ್ಗೆ ಅವರು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ ಬಳಿಕ ಮೈದಾನದಲ್ಲಿ ‘ಶುದ್ಧೀಕರಣ’ ಕಾರ್ಯಕ್ರಮ ನಡೆಸಲಾಗಿತ್ತು. ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಖರ್ಗೆ ಅವರು ಆಗಸ್ಟ್ 13ರಂದು ರಾಜ್ಯಸಭೆಯಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪವಾದ ಸಂದರ್ಭದಲ್ಲಿ ಜೆ.ಪಿ. ನಡ್ಡಾ ಅವರು ಇಂತಹ ಚಟುವಟಿಕೆಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಹೇಳಿ, ಘಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ್ದರು. ಇದೀಗ ಇದೇ ಭರವಸೆಯನ್ನು ನೆನಪಿಸಿರುವ ಖರ್ಗೆ, 24 ದಿನಗಳಾದರೂ ಪ್ರಕರಣದಲ್ಲಿ FIR ದಾಖಲಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಡ್ಡಾ ಅವರಿಗೆ ಬರೆದ ಪತ್ರದಲ್ಲಿ, ಈ ಘಟನೆ ತಮ್ಮ ವೈಯಕ್ತಿಕ ವಿಚಾರಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಖರ್ಗೆ ಹೇಳಿದ್ದಾರೆ. ಪ್ರತಿನಿತ್ಯ ಇಂತಹ ವಾಸ್ತವಗಳನ್ನು ಎದುರಿಸುತ್ತಿರುವ ಲಕ್ಷಾಂತರ ಜನರ ಭಾವನೆಗಳಿಗೆ ಈ ವಿಚಾರ ಸಂಬಂಧಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಪಾಠ ಕಲಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.
ಅಲ್ಲದೆ, ರಾಜ್ಯಸಭೆಯಲ್ಲಿ ನೀಡಿದ್ದ ಭರವಸೆಯ ಹಿನ್ನೆಲೆಯಲ್ಲಿ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಶುದ್ಧೀಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನಿರ್ದೇಶನ ನೀಡುವಂತೆ ಖರ್ಗೆ ಅವರು ನಡ್ಡಾ ಅವರನ್ನು ಒತ್ತಾಯಿಸಿದ್ದಾರೆ.
ಈ ವಿವಾದದ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈಗಾಗಲೇ ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ಕಾಂಗ್ರೆಸ್ ಈ ಘಟನೆಯನ್ನು ಜಾತಿ ಆಧಾರಿತ ಅವಮಾನ ಹಾಗೂ ಅಸ್ಪೃಶ್ಯತೆಯ ಮನೋಭಾವಕ್ಕೆ ಸಂಬಂಧಿಸಿದ ಘಟನೆ ಎಂದು ಟೀಕಿಸಿದೆ. ಮತ್ತೊಂದೆಡೆ, ಉತ್ತರಾಖಂಡ ಸರ್ಕಾರ ಹಾಗೂ ಕಾರ್ಯಕ್ರಮದ ಆಯೋಜಕರ ಪೈಕಿ ಕೆಲವರು ಶುದ್ಧೀಕರಣ ಕಾರ್ಯಕ್ರಮಕ್ಕೆ ಜಾತಿ ಆಧಾರಿತ ಉದ್ದೇಶವಿಲ್ಲ, ಮೈದಾನದಲ್ಲಿ ಉಳಿದಿದ್ದ ಕಸ ಹಾಗೂ ಕೊಳಕು ತೆರವುಗೊಳಿಸುವ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿ ನಡೆಸಲಾಗಿತ್ತು ಎಂದು ಹೇಳಿರುವುದು ವಿವಾದಕ್ಕೆ ಮತ್ತೊಂದು ಆಯಾಮ ನೀಡಿದೆ.
ಇದರ ಬೆನ್ನಲ್ಲೇ ಖರ್ಗೆ ಅವರು ಇದೀಗ ನಡ್ಡಾಗೆ ಪತ್ರ ಬರೆದು FIR ದಾಖಲಿಸುವಂತೆ ಸ್ಪಷ್ಟವಾಗಿ ಆಗ್ರಹಿಸಿರುವುದು, ಹಲ್ದ್ವಾನಿ ‘ಶುದ್ಧೀಕರಣ’ ಪ್ರಕರಣವನ್ನು ಮತ್ತೊಮ್ಮೆ ರಾಷ್ಟ್ರೀಯ ರಾಜಕೀಯ ಚರ್ಚೆಯ ಕೇಂದ್ರಕ್ಕೆ ತಂದಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















