ಚಿಕ್ಕಮಗಳೂರು: ನೇಪಾಳದಲ್ಲಿ ಸಂಭವಿಸಿರುವ ಜಲಪ್ರಳಯ ಹಾಗೂ ಭೂಕುಸಿತದಿಂದ ಉಂಟಾಗಿರುವ ಭೀಕರ ದುರಂತಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶ್ರೀ ಶಾರದಾಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಸಂತ್ರಸ್ತರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಕಿರಿಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳು ಪ್ರಾರ್ಥಿಸಿದರು.
ಶೃಂಗೇರಿಯ ಶ್ರೀ ಶಾರದಾ ಪರಮೇಶ್ವರಿ ಹಾಗೂ ಶ್ರೀ ಚಂದ್ರಮೌಳೀಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ಶ್ರೀಗಳು, ನೇಪಾಳದಲ್ಲಿ ಸಂಭವಿಸಿರುವ ಮಹಾ ವಿಪತ್ತಿನಿಂದ ಜನಜೀವನ ಶೀಘ್ರ ಸಹಜ ಸ್ಥಿತಿಗೆ ಮರಳಲಿ ಎಂದು ಹಾರೈಸಿದರು.
ಮನೆ, ಕುಟುಂಬ ಹಾಗೂ ಆಪ್ತರನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ದೇವರು ಧೈರ್ಯ ಮತ್ತು ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ. ದುರಂತದಿಂದ ಉಂಟಾಗಿರುವ ನಷ್ಟವು ಆದಷ್ಟು ಬೇಗ ಸರಿಹೋಗಲಿ ಹಾಗೂ ನೇಪಾಳವು ಶೀಘ್ರವಾಗಿ ಚೇತರಿಸಿಕೊಂಡು ಅಭಿವೃದ್ಧಿಯ ಹಾದಿಗೆ ಮರಳಲಿ ಎಂದು ಶ್ರೀಗಳು ಆಶಿಸಿದರು.
ಜಗದ್ಗುರು ಆದಿ ಶಂಕರಾಚಾರ್ಯರು ಸ್ಥಾಪಿಸಿದ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಪರಂಪರೆಯ ಆಶೀರ್ವಾದ ಹಾಗೂ ಪ್ರಸ್ತುತ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಅನುಗ್ರಹದೊಂದಿಗೆ ನೇಪಾಳದ ಜನರ ಸಂಕಷ್ಟ ನಿವಾರಣೆಯಾಗಲಿ ಎಂದು ಪ್ರಾರ್ಥಿಸುವುದಾಗಿ ಅವರು ತಿಳಿಸಿದರು.
ಸಂತ್ರಸ್ತರ ನೆರವಿಗೆ ಶ್ರೀಮಠ ಸಿದ್ಧ : ನೇಪಾಳದ ಜನರು ಸಂಕಷ್ಟದ ಸಂದರ್ಭದಲ್ಲಿ ನೆರವಿನ ಅಗತ್ಯದಲ್ಲಿದ್ದಾರೆ. ಸಂತ್ರಸ್ತರ ಕಣ್ಣೀರೊರೆಸಲು ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠವು ನೆರವಿನ ಹಸ್ತ ಚಾಚಲು ಸಿದ್ಧವಿದೆ ಎಂದು ಶ್ರೀ ಶ್ರೀ ವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳು ತಿಳಿಸಿದರು.
ತುರ್ತು ಪರಿಹಾರ ಹಾಗೂ ಅಗತ್ಯ ನೆರವನ್ನು ಸಂತ್ರಸ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರೀಮಠದ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಪರಿಹಾರ ಸಾಮಗ್ರಿ ಮತ್ತು ನೆರವು ಶೀಘ್ರವಾಗಿ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನೇಪಾಳದ ಜನರು ಈ ಮಹಾ ವಿಪತ್ತಿನಿಂದ ಶೀಘ್ರ ಚೇತರಿಸಿಕೊಂಡು ಮತ್ತೊಮ್ಮೆ ಶಾಂತಿ, ನೆಮ್ಮದಿ ಹಾಗೂ ಸಂತೋಷದ ಜೀವನ ನಡೆಸುವಂತಾಗಲಿ ಎಂದು ಶ್ರೀಗಳು ಹಾರೈಸಿದರು.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















