ಸ್ಯಾಂಡಲ್‌ವುಡ್ ಸ್ಟಾರ್ ನಟರು ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳನ್ನಾದರೂ ಮಾಡಬೇಕು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ಹಾಗೇ ಈ ಕುರಿತು ಕೇಳಲಾದ ಪ್ರಶ್ನೆಗೆ ನಟ ಕಿಚ್ಚ ಸುದೀಪ್ ‘ಬಿಗ್ ಬಾಸ್ ಕನ್ನಡ’ ಪ್ರೆಸ್‌ಮೀಟ್‌ನಲ್ಲಿ ಅತ್ಯಂತ ಭಾವುಕವಾಗಿ ಉತ್ತರಿಸಿದ್ದಾರೆ. ‘ಯಾವುದಾದರೂ ವರ್ಷ ನನ್ನ ಸಿನಿಮಾ ಬಿಡುಗಡೆಯಾಗದಿದ್ದರೆ ನನಗಿಂತ ಹೆಚ್ಚು ಬೇಸರ ಮತ್ತು ನೋವು ಬೇರೆಯಾರಿಗೂ ಆಗುವುದಿಲ್ಲ’ ಎಂದು ಅಭಿನಯ ಚಕ್ರವರ್ತಿ ಸುದೀಪ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಪ್ರೆಸ್‌ಮೀಟ್‌ನಲ್ಲಿ ಪತ್ರಕರ್ತರು “ಬಿಗ್ ಬಾಸ್ ಜೊತೆಗೆ ವರ್ಷಕ್ಕೆ ನಿಮ್ಮಿಂದ ಕನಿಷ್ಠ ಎರಡು ಸಿನಿಮಾಗಳು ಬರಬೇಕು ಎಂಬುದು ಅಭಿಮಾನಿಗಳ ಆಸೆ. ನಿಮ್ಮ ಮುಂದಿನ ಪ್ಲಾನ್ ಏನು?” ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸುದೀಪ್, “ನನಗೂ ಅನೇಕ ಜವಾಬ್ದಾರಿಗಳಿವೆ ಎಂಬುದನ್ನು ಮರೆಯಬಾರದು. ಸಿನಿಮಾಗಿಂತ ದೊಡ್ಡ ಪ್ರೀತಿ ನನಗೆ ಇನ್ನೊಂದಿಲ್ಲ. ಸಿನಿಮಾ ರಿಲೀಸ್ ಆಗದಿದ್ದಾಗ ಐ ಬ್ಲೀಡ್ ಮೋರ್ (I bleed more) ಎಂಬಷ್ಟರ ಮಟ್ಟಿಗೆ ನನಗೆ ನೋವಾಗುತ್ತದೆ” ಎಂಬ ಮಾತನ್ನು ಹೇಳಿದರು.
ಅಲ್ಲದೇ..ಕೇವಲ ಐದುವರೆ ತಿಂಗಳಲ್ಲೇ ‘ಬಿಲ್ಲಾ ರಂಗ ಭಾಷಾ’ ಚಿತ್ರದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಮುಗಿಸಿರುವುದಾಗಿ ತಿಳಿಸಿದ ಕಿಚ್ಚ, “120 ದಿನಗಳ ಕಾಲ 80 ಲೊಕೇಶನ್‌ಗಳು ಹಾಗೂ 22 ಸೆಟ್‌ಗಳಲ್ಲಿ ಹಗಲಿರುಳು ನಿದ್ದೆಗೆಟ್ಟು ಕೆಲಸ ಮಾಡಿದ್ದೇನೆ. ಕೆಲವೊಮ್ಮೆ ವೈಯಕ್ತಿಕ ಕಾರಣಗಳು ಅಥವಾ ಸ್ಕ್ರಿಪ್ಟ್ ಸಮಸ್ಯೆಗಳಿಂದ ಸಿನಿಮಾ ತಡವಾಗಬಹುದು. ಆದ್ರೆ ನಾನು ಎಲ್ಲೋ ಪಾರ್ಟಿ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿಲ್ಲಎಂದರು. ಈ ಬಾರಿ ಹೆಚ್ಚು ಸಿನಿಮಾಗಳನ್ನು ಮಾಡಲು ದೊಡ್ಡ ಮಟ್ಟದ ಪ್ಲಾನ್ ಮಾಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಸದ್ಯ ಅನೂಪ್ ಭಂಡಾರಿ ನಿರ್ದೇಶನದ ಬಹುನಿರೀಕ್ಷಿತ ‘ಬಿಲ್ಲಾ ರಂಗ ಭಾಷಾ’ ಚಿತ್ರದ ಫಸ್ಟ್ ಕಟ್, ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 1ರಂದು ಮಧ್ಯರಾತ್ರಿ 12 ಗಂಟೆಗೆ ಬಿಡುಗಡೆಯಾಗಲಿದೆ. ಅಭಿಮಾನಿಗಳಲ್ಲಿ ಈ ಸಿನಿಮಾ ಕುರಿತು ಭಾರೀ ನಿರೀಕ್ಷೆ ಮೂಡಿದೆ.




















