SK Home Ad
Home ಸಿನಿ ಮಿಲ್ಸ್ ‘ಬಿಗ್ ಬಾಸ್’ನಲ್ಲಿ ದರ್ಶನ್ ಹಾಡು ಪ್ಲೇ ಆಗಲ್ವಾ?: ಕಿಚ್ಚ ಸುದೀಪ್ ಫುಲ್‌ ಗರಂ; ವಿಡಿಯೋ ವೈರಲ್

‘ಬಿಗ್ ಬಾಸ್’ನಲ್ಲಿ ದರ್ಶನ್ ಹಾಡು ಪ್ಲೇ ಆಗಲ್ವಾ?: ಕಿಚ್ಚ ಸುದೀಪ್ ಫುಲ್‌ ಗರಂ; ವಿಡಿಯೋ ವೈರಲ್

0
120

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಆಯೋಜಕರು ಹಾಗೂ ಶೋ ನಿರೂಪಕ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸುದ್ದಿಗೋಷ್ಠಿ ನಡೆಸಿ ಸೀಸನ್‌ನ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪತ್ರಕರ್ತರೊಬ್ಬರು ಕೇಳಿದ ಖಾಸಗಿ ಹಾಗೂ ತಾಂತ್ರಿಕ ಪ್ರಶ್ನೆಯೊಂದಕ್ಕೆ ಸುದೀಪ್ ನೀಡಿರುವ ನೇರ ಹಾಗೂ ಸ್ಪಷ್ಟ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ‘ಬಿಗ್ ಬಾಸ್’ ಮನೆಯಲ್ಲಿ ಸ್ಪರ್ಧಿಗಳನ್ನು ಬೆಳಗ್ಗೆ ಎಬ್ಬಿಸಲು ಹಾಗೂ ಪ್ರಮುಖ ಸನ್ನಿವೇಶಗಳಲ್ಲಿ ಕನ್ನಡದ ಸೂಪರ್ ಹಿಟ್ ಸಿನಿಮಾಗಳ ಹಾಡುಗಳನ್ನು ಪ್ಲೇ ಮಾಡಲಾಗುತ್ತದೆ. ಆದ್ರೆ ನಟ ದರ್ಶನ್ ಅಭಿನಯದ ಸಿನಿಮಾಗಳ ಹಾಡುಗಳನ್ನು ಪ್ಲೇ ಮಾಡುತ್ತಿಲ್ಲ ಏಕೆ, ಇದಕ್ಕೆ ಕಾಪಿರೈಟ್ಸ್ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯಗಳು ಕಾರಣವೇ ಎಂಬ ಪ್ರಶ್ನೆ ಪ್ರೆಸ್‌ಮೀಟ್‌ನಲ್ಲಿ ಕೇಳಲಾಗಿತ್ತು.

ನಂತರ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, “ನನಗೆ ಪ್ರತಿಯೊಬ್ಬ ಕಲಾವಿದನ ಮೇಲೂ ಗೌರವವಿದೆ. ಯಾರ ಮೇಲೂ ದ್ವೇಷವಿಲ್ಲ, ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ” ಎಂದು ಸ್ಪಷ್ಟಪಡಿಸಿದರು. ಮುಂದುವರಿದು ಮಾತನಾಡಿದ ನಟ, ಹಾಡುಗಳನ್ನು ಪ್ಲೇ ಮಾಡದಿರಲು ವೈಯಕ್ತಿಕ ಕಾರಣಗಳಿಗಿಂತ ಆಡಳಿತಾತ್ಮಕ ಹಾಗೂ ತಾಂತ್ರಿಕ ಸವಾಲುಗಳೇ ಪ್ರಮುಖ ಕಾರಣವಾಗಿರುತ್ತವೆ ಎಂದು ಸ್ಪಷ್ಟವಾಗಿ ವಿವರಿಸಿದರು.

ಅಷ್ಟೇ ಅಲ್ಲದೆ..”ಕೆಲವು ಹಾಡುಗಳನ್ನು ಪ್ಲೇ ಮಾಡಿದರೆ ‘ಈ ಸಾಂಗ್ ಯಾಕೆ ಹಾಕಿದ್ರಿ?’ ಎಂದು ಪ್ರಶ್ನಿಸುವವರು, ವಿರೋಧ ವ್ಯಕ್ತಪಡಿಸುವವರು ಅಥವಾ ಬೆದರಿಕೆ ಒಡ್ಡುವವರು ಇರಬಹುದು. ಯಾರನ್ನೂ ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ಇದರ ಬಗ್ಗೆ ಹೆಚ್ಚು ಮಾತನಾಡುತ್ತಾ ಹೋದರೆ ವಿಷಯ ಬೇರೆ ದಿಕ್ಕಿಗೆ ಹೋಗುತ್ತದೆ” ಎಂದು ಹೇಳುವ ಮೂಲಕ ಸುದೀಪ್ ಈ ವಿಚಾರದಲ್ಲಿದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.