SK Home Ad
Home ನಮ್ಮ ಜಿಲ್ಲೆ ಮೈಸೂರು ಬಾಲಕೃಷ್ಣ ಗನ್ ಹಿಡಿದಿದ್ದು ಓಪನ್ ಮಾಡ್ಲಾ?, ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಬಾಲಕೃಷ್ಣ ಗನ್ ಹಿಡಿದಿದ್ದು ಓಪನ್ ಮಾಡ್ಲಾ?, ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

0
96

ಮೈಸೂರು: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನು ಎರಡು ವರ್ಷ ಅಧಿಕಾರದಲ್ಲಿದ್ದರೆ ವಿಧಾನಸೌದವು ನಮ್ಮಪ್ಪನ ಆಸ್ತಿ ಎಂದು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾರೆ. ಬೇಕಾದರೆ ವಿಧಾನಸೌಧವನ್ನ ಮಾರಿಯೇ ಬಿಡುತ್ತಾರೆ. ಇಂತಹವರು ಇನ್ನೂ 15 ವರ್ಷ ನಾವು ಸಿಎಂ ಅಂಥ ಮಾತನಾಡುತ್ತಿರುವುದು ಈ ರಾಜ್ಯದ ದೌರ್ಭಾಗ್ಯ ಎಂದರು.

ಅಭಿವೃದ್ಧಿಯ ಹೆಸರಿನಲ್ಲಿ ಒಂದು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ರಾಜ್ಯಕ್ಕೆ ಈ ಸರ್ಕಾರದ ಕೊಡುಗೆ ಏನು ಹೇಳಿ. ಮಾತು ಎತ್ತಿದರೆ ಕೇಂದ್ರ ಸಚಿವರು ಸಂಸದರು ಎನೂ ಮಾಡುತ್ತಿಲ್ಲ ಎಂದು ಬೊಬ್ಬೆ ಹಾಕುತ್ತಾರೆ. ಕೇಂದ್ರದ ಸಹಾಯಕ್ಕಾಗಿ ಯಾವತ್ತು ಕಾಯಬಾರದು. ನಮ್ಮದೆ ರಾಜ್ಯದ ತೆರಿಗೆ ಹಣ ಇದೆ. ಅದರಲೇ ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಹೇಳಿದರು.

ಅಕ್ರಮ ಮುಚ್ಚಿ ಹಾಕಲು ಗೃಹ ಖಾತೆ: ಬೇರೆಯವರಿಗೆ ಉತ್ತರ ಕೊಟ್ಟಂತೆ ನನಗೆ ಉತ್ತರ ಕೊಡಲು ಬರಬೇಡಿ. ನನ್ನ ಆರೋಪಗಳಿಗೆ ಜವಾಬ್ದಾರಿಯುತವಾಗಿ ಉತ್ತರ ಕೊಡಿ. ಇಂಜಿನಿಯರ್ ನೇಮಕಾತಿ ವಿಚಾರದಲ್ಲಿ ನೀವು ಮಾಡಿದ ಅಕ್ರಮ ಮುಚ್ಚಿ ಹಾಕಲು ಗೃಹ ಖಾತೆ ಪಡೆದಿದ್ದೀರಾ. ನಾನು ದಾಖಲೆ ಸಮೇತ ಪತ್ರಿಕಾಗೋಷ್ಟಿ ಮಾಡಿದ್ದೇನೆ. ನನಗೆ ಗಂಭೀರವಾಗಿ ಪ್ರತಿಕ್ರಿಯೆ ಕೊಡಬೇಕು ಎಂದು ಕುಮಾರಸ್ವಾಮಿ ಪ್ರಿಯಾಂಕ ಖರ್ಗೆಗೆ ಆಗ್ರಹಿಸಿದರು.

ಜೆಡಿಎಸ್ ಭ್ರಷ್ಟರ ಪಾಲಿನ ಸಿಂಹ ಸ್ವಪ್ನ. ನಿಮ್ಮಂತವರ ಅಕ್ರಮ ಬಯಲು ಮಾಡುವ ಸಲುವಾಗಿಯೇ ಜೆಡಿಎಸ್ ಇದೆ. ನಮ್ಮ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದರು.

10 ಲಕ್ಷ ಎಲ್ಲಿ ಕೊಡುತ್ತಿರಿ: ಪ್ರತಿ ಪಂಚಾಯತಿಗಳಲ್ಲಿ ಭಾರತ್ ಜೋಡ್ ಸಂಘ ರಚನೆಗೆ ಸರ್ಕಾರ ಮುಂದಾಗಿದೆ. ಪ್ರತಿ ಸಂಘಕ್ಕೆ 10 ಲಕ್ಷ ಎಲ್ಲಿಂದ ಕೊಡುತ್ತೀರಾ. ಇಸ್ಪೀಟ್ ಆಡಿಸಲು ನೀವು ಮಾಡುತ್ತಿದ್ದ ದಂಧೆಗಳನ್ನ ಮುಂದುವರೆಸಲು ಈ ಸಂಘ ಕಟ್ಟುತ್ತಿದ್ದೀರಾ. ಯಾರ ಮನೆಯ ದುಡ್ಡು ಅಂಥ ಈ ಸಂಘಕ್ಕೆ ಹಣ ವೆಚ್ಚ ಮಾಡುತ್ತೀದ್ದಿರಾ. ಕಾಂಗ್ರೆಸ್ ಯಾತ್ರೆಯಲ್ಲಿ ಭಾಗವಹಿಸದವರಿಗೆ ಸರ್ಕಾರದ ದುಡ್ಡು ಕೊಟ್ಟರೆ ಅದರಲ್ಲಿ ಅರ್ಥ ಇದ್ಯಾ ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್ ಪರ ಬ್ಯಾಟಿಂಗ್: ಆರ್‌ಎಸ್‌ಎಸ್ ನಿಂದ ದೇಶಕ್ಕೆ ಯಾವ ಗಂಡಾಂತರ ಇಲ್ಲ. ಕಾಂಗ್ರೆಸ್‌ನಿಂದ ದೇಶಕ್ಕೆ ಗಂಡಾಂತರ ಇದೆ. ಆರ್‌ಎಸ್‌ಎಸ್ ಏನು ತಪ್ಪು ಮಾಡಿದೆ ಎಂದು ಪದೇ ಪದೇ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ. ಏನು ತಪ್ಪು ಮಾಡಿದೆ ಎಂದು ಹೇಳಿ. ನಾನು ಈ ಹಿಂದೆ ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿದ್ದೇನೆ. ನನಗೆ ಈಗ ಅರ್ಥ ಆಗಿದೆ. ನನ್ನ ಸಿದ್ಧಾಂತದ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ. ಡಿಎಂಕೆ ಜೊತೆ ಚಕ್ಕಂದ ಆಡಿ ಈಗ ಅಧಿಕಾರಕ್ಕಾಗಿ ಟಿವಿಕೆ ಜೊತೆ ಹೋಗಿರುವ ಕಾಂಗ್ರೆಸ್‌ಗೆ ಯಾವ ಸಿದ್ಧಾಂತ ಇದೆ. ಕಾಂಗ್ರೆಸ್ ಸಿದ್ಧಾಂತದ ಕಥೆಗಳು ಬೂಡಾಟಿಕೆಗಳು ಎಲ್ಲವನ್ನೂ ನಾನು ಬಲ್ಲೆ ಎಂದರು.

ಸಿದ್ದರಾಮಯ್ಯ ಕ್ಷೇತ್ರದಲ್ಲಿ ಸ್ವಾಧೀನ: ವರುಣದಲ್ಲಿ 165 ಎಕರೆ ಭೂಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ಹೋರಾಟಕ್ಕೆ ನನ್ನ ಬೆಂಬಲ ಇದೆ. ಮುಂದಿನ ದಿನಗಳಲ್ಲಿ ನಾನೇ ಆ ಸ್ಥಳಕ್ಕೆ ಖುದ್ದು ಭೇಟಿ ನೀಡುತ್ತೇನೆ. ಫಲವತ್ತಾದ ಭೂಮಿಯಾಗಿದ್ದರೆ ಸರ್ಕಾರ ಅದನ್ನ ವಶಪಡಿಸಿಕೊಳ್ಳವುದಕ್ಕೆ ಬಿಡುವುದಿಲ್ಲ. ಸರ್ಕಾರ ಯಾಕೆ ಪದೇ ಪದೇ ಫಲವತ್ತಾದ ಭೂಮಿ ಮೇಲೆ ಕಣ್ಣಾಕುತ್ತಿದೆ ಎಂಬುದೇ ಗೊತ್ತಿಲ್ಲ. ವರುಣಾ ಕ್ಷೇತ್ರದ ಪರವಾಗಿ ನಾನಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಾರಕಿಹೊಳಿಗೆ ತಿರುಗೇಟು: ದಾಖಲೆಗಳು ಓದಲು ಬರದಿದ್ದರೆ ಅಧಿಕಾರಿಗಳಿಂದ ಓದಿಸಿಕೊಳ್ಳಿ. 2027ಕ್ಕೆ ನೈಸ್ ಒಪ್ಪಂದದ ಅವಧಿ ಮುಗಿಯಲಿದೆ. ಇನ್ನೂ 30 ವರ್ಷ ಬಾಕಿ ಎಂಬುದು ಎಲ್ಲಿದೆ ಹೇಳಿ. ಸುಮ್ಮನೆ ಯಾವ್ಯವುದೊ ದಾಖಲೆಗಳ ಬಗ್ಗೆ ಮಾತನಾಡಬೇಡಿ. ಮೊದಲು ಮೂಲ ದಾಖಲೆಗಳನ್ನ ಓದಿಕೊಳ್ಳಿ. ಮೈಸೂರಿನಿಂದ ನೈಸ್ ರಸ್ತೆ ಆರಂಭವಾಗುತ್ತದೆ ಎಂದು 12 ವರ್ಷದ ಹಿಂದೆ ಹೇಳಿದ್ದರು. ಈಗ ಅದನ್ನು ಹಾಲಿ ಸಿಎಂಗೆ ವಹಿಸಿರಬೇಕು ಎಂದು ವ್ಯಂಗವಾಡಿದರು.

ಸಚಿವ ಬಾಲಕೃಷ್ಣ ವಿರುದ್ಧ ಕೆಂಡಮಂಡಲ: ಗನ್ ಹಿಡಿದುಕೊಂಡು ಬಿಡದಿಯಲ್ಲಿ ಒಬ್ಬರಿಗೆ ಹೆದರಿಸಿದ ಕಥೆ ಓಪನ್ ಮಾಡ್ಲಾ. ಸುಮ್ಮನೆ ನನ್ನ ತಂಟೆಗೆ ಬರಬೇಡಿ. ಎಲ್ಲಾ ಹಗರಣಗಳನ್ನು ಬಿಚ್ಚಡಬೇಕಾ. ನಾನಿನ್ನು ನಿಮ್ಮ ಮೇಲೆ ಯಾವ ಆರೋಪಗಳನ್ನು ಮಾಡಿಲ್ಲ. ಶುರು ಮಾಡಿದರೆ ಎಲ್ಲವನ್ನು ತೆರೆದಿಡುತ್ತೇನೆ. ನನಗೆ ಆ ವ್ಯಕ್ತಿಯ ಪದೇ ಪದೇ ಕೇಳಲೇ ಬೇಡಿ ಎಂದು ಹೇಳಿದರು.

ಜೆಡಿಎಸ್ ಆಪರೇಷನ್ ಯತ್ನ: ಸಿಎಂ ಆಪರೇಷನ್ ಜೆಡಿಎಸ್ ನಡೆಸುತ್ತಿದ್ದಾರೆ. ನಮ್ಮ ಜೊತೆ ಬಂದಿದ್ರೆ ಸಚಿವರಾಗುತ್ತಿರಾ, ನಾಲ್ಕು ಜನರನ್ನು ಕರೆದುಕೊಂಡು ಬನ್ನಿ ಎಂದು ಸಿಎಂ ಆಫರ್ ಗಳನ್ನ ಇಡುತ್ತಿದ್ದಾರೆ. ಜೆಡಿಎಸ್ ಮುಗಿಸಲೇ ಬೇಕು ಅನ್ನೊ ಕಾರಣಕ್ಕೆ ಈ ಮಾತುಕತೆ ನಡೆದಿದೆ. ದಿನ ರಾತ್ರಿಯಾದರೆ ಜೆಡಿಎಸ್ ಶಾಸಕರನ್ನು ಕರೆಯುವುದು ಪಕ್ಷಕ್ಕೆ ಬರುವಂತೆ ಹೇಳುವುದು. ಇದೇ ಇವರ ಕೆಲಸವಾಗಿದೆ. ಎಲ್ಲೆಲಿ ನಮ್ಮ ಶಾಸಕರ ಜೊತೆ ಮಾತನಾಡಿದ್ದಾರೆ ಎಲ್ಲವೂ ಗೊತ್ತಿದೆ ಎಂದು ಹೇಳಿದರು.

ಜಿಟಿಡಿ ಬಗ್ಗೆ ಚರ್ಚೆ ಬೇಡ: ಚಾಮುಂಡೇಶ್ವರಿಯ ಹಾಲಿ ಶಾಸಕರ ಬಗ್ಗೆ ಚರ್ಚೆ ಮಾಡಬೇಡಿ. ಅಲ್ಲಿ ಯಾರೇ ಸ್ಪರ್ಧೆ ಮಾಡಿದರು ಕುಮಾರಸ್ವಾಮಿ ಸ್ಪರ್ಧೆ ಮಾಡಿದಂತೆ. 2018ರಲ್ಲಿ 10 ದಿನ ಪ್ರವಾಸ ಮಾಡಿದೆ. ನನ್ನ ಮುಖ ನೋಡಿಕೊಂಡು ಪಕ್ಷವನ್ನು ಗೆಲ್ಲಿಸಿದರು. ಮುಂದಿನ ಚುನಾವಣೆಯಲ್ಲೂ ನನ್ನ ಮುಖ ನೋಡಿಕೊಂಡೆ ಅಭ್ಯರ್ಥಿಯನ್ನ ಗೆಲ್ಲಿಸುತ್ತಾರೆ. ಬಹಳಷ್ಟು ಜನರು ನಮ್ಮ ಪಕ್ಷದಲ್ಲಿ ಇದ್ದಾರೆ. ನನ್ನ ಹಿಂದೆ ಮುಂದೆ ಅಕ್ಕ ಪಕ್ಕ ಇರುವವರು ಯಾರಾದರೂ ಶಾಸಕರಾಗಬಹುದು ಎಂದು ಸೂಚ್ಯವಾಗಿ ಹೇಳಿದರು.

ಜನತಾ ಪರಿವಾರ ಒಗ್ಗೂಡಿಸಲು ಯತ್ನ: ಕೆಲವರು ಹಿಂದೆ ಬಿಟ್ಟು ಹೋದವರು ಪಕ್ಷಕ್ಕೆ ವಾಪಸ್ ಬರುವ ಬಗ್ಗೆ ಮಾತನಾಡುತ್ತಿದ್ದಾರೆ. ಎಲ್ಲರನ್ನೂ ಸುಮ್ಮನೆ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ಷರತ್ತು ಅಪ್ಲೈ ಇದೆ. ಕೆಲವರನ್ನಂತು ಬಂದರು ತೆಗೆದುಕೊಳ್ಳುವುದಿಲ್ಲ. ನೋಡಿಮಾಡಿ ಪಕ್ಷಕ್ಕೆ ಕರೆದುಕೊಳ್ಳುತ್ತೇನೆ. 2028ಕ್ಕೆ ಬಲಿಷ್ಟ ಸರ್ಕಾರ ಬರಲು ಸಿದ್ಧತೆ ನಡೆಸಿದ್ದೇನೆ ಎಂದು ಹೇಳಿದರು.