ರಾಯಚೂರು: ಪ್ರತಿವರ್ಷದಂತೆ ಈ ವರ್ಷವೂ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ)ಯಿಂದ ಗುರುವಾರ ಬಂದ ಶ್ರೀನಿವಾಸದೇವರ ಶೇಷವಸ್ತ್ರಗಳನ್ನು ವಾದ್ಯಮೇಳಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ತಿರುಪತಿ ತಿರುವಲ ದೇವಸ್ಥಾನ(ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಮುದ್ದಾಡ ರವಿಚಂದ್ರ ಅವರು ಇತರ ಟಿಟಿಡಿ ಅಧಿಕಾರಿಗಳೊಂದಿಗೆ ತೆಗೆದುಕೊಂಡ ಬಂದ ಶ್ರೀನಿವಾಸದೇವರ ಶೇಷವಸ್ತ್ರಗಳನ್ನು ಶ್ರೀಮಠದ ಸಂಪ್ರದಾಯದಂತೆ ಮಠದ ಅಧಿಕಾರಿಗಳು ಮತ್ತು ಪಂಡಿತರು ಸ್ವಾಗತಿಸಿದರು. ಮಧ್ವ ಕಾರಿಡಾರ್ ಮೂಲಕ ಗ್ರಾಮದೇವತೆ ಶ್ರೀಮಂಚಾಲಮ್ಮದೇವಿಗೆ ಪೂಜೆ ಸಲ್ಲಿಸಿದರು.
ನಂತರ ಟಿಟಿಡಿ ಅಧಿಕಾರಿಗಳು ಶ್ರೀಮಠದ ಪೀಠಾಧಿತಿಗಳಾದ ಶ್ರೀಸುಬುದೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಶೇಷವಸ್ತ್ರಗಳನ್ನು ಹಸ್ತಾಂತರಿಸಿದರು. ಶ್ರೀಪಾದಂಗಳವರು
ಭಕ್ತಿಯಿಂದ ತಲೆಯಮೇಲೆ ಶೇಷವಸ್ತ್ರಗಳನ್ನು ಹೊತ್ತುಕೊಂಡು ಶ್ರೀರಾಯರ ಮೂಲಬೃಂದಾವದಲ್ಲಿಟ್ಟು ಸಮರ್ಪಣೆ ಮಾಡಿದರು.
ಟಿಟಿಡಿ ಅಧಿಕಾರಿಗಳು ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಟಿಟಿಡಿ ಪ್ರಸಾದ ಮತ್ತು ಶೇಷವಸ್ತ್ರವನ್ನು ಸಮರ್ಪಿಸಿದರು ಶ್ರೀಪಾದಂಗಳವರು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಮುದ್ದಾಡ ರವಿಚಂದ್ರ ಹಾಗೂ ಇತರ ಟಿಟಿಡಿ ಅಧಿಕಾರಿಗಳಿಗೆ ರಾಯರ ಶೇಷವಸ್ತ್ರ, ಫಲ-ಮಂತ್ರಾಕ್ಷತೆ ಮತ್ತು ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.
ಶ್ರೀಮಠದ ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್, ಶ್ರೀಮಠದ ವಿದ್ವಾಂಸರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.






















