ಬೆಂಗಳೂರು: ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ತರಕಾರಿಗಳು ತಾಜಾ ಕಾಣಬೇಕೆಂದು ಕೆಮಿಕಲ್ ಸ್ಪ್ರೇ ಮಾಡುವ ಬಗ್ಗೆ ದೂರುಗಳು ಕೇಳಿಬಂದಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ ಖಾದರ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್, ಮಾಲ್ ಕಂಪನಿಗಳಲ್ಲಿ ತರಕಾರಿ ಹಾಳಾಗದಂತೆ ಕಲರ್ ಕಲರ್ ಲೈಟ್ ಹಾಕಿ ತರಕಾರಿ ಹೊಳೆಯುವ ಹಾಗೆ ಇಡುತ್ತಾರೆ. ತರಕಾರಿ ತಾಜಾ ಕಾಣಬೇಕು ಅಂತ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ, ಪರಿಶೀಲನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಂದಿನ ವಾರ ಹೋಟೆಲ್ ಅಸೋಸಿಯೇಷನ್, ರೆಸ್ಟೋರೆಂಟ್ ಅಸೋಸಿಯೇಷನ್ ಹಾಗೂ ಇಂದಿರಾ ಕ್ಯಾಂಟಿನ್ ಗುತ್ತಿಗೆದಾರರ ಜೊತೆ ಸಭೆ ಆಯೋಜಿಸಲಾಗಿದೆ. ಹೋಟೆಲ್‌ಗಳ ಪರಿಶೀಲನೆ ವೇಳೆ ಅನೇಕ ಲೋಪದೋಷ ಕಂಡುಬಂದಿದೆ. ಕ್ಲಬ್, ಹೋಟೆಲ್‌ನವರು ಯಾವ ರೀತಿ ಆಹಾರ ತಯಾರಿಕೆ ಸುರಕ್ಷತೆ ಹಾಗೂ ಟ್ರೈನಿಂಗ್ ನೀಡುವ ಬಗ್ಗೆ ಯೋಜನೆ ರೂಪಿಸಿದ್ದೇವೆ. ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಕೂಡ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ದತ್ತೂರ ಬೀಜ ಮಾರಾಟ ಮಾಡುತ್ತಿದ್ದ 3 ಇ-ಕಾಮರ್ಸ್ ಜಾಲತಾಣಗಳ ಆಹಾರ ಪರವಾನಗಿ ಅಮಾನತು ಮಾಡಲಾಗಿದೆ. ಕೆಲವು ಕಡೆ ಕೇಂದ್ರ ಎಫ್‌ಎಸ್‌ಎಸ್‌ಎಐನಿಂದ ಲೈಸೆನ್ಸ್ ಪಡೆದಿದ್ದೇವೆ ಎಂದು ಮಾಲೀಕರು ಹೇಳುತ್ತಿದ್ದಾರೆ. ಕೇಂದ್ರದ ಅಧಿಕಾರಿಗಳಿಗೆ ಹೇಳಿದರೆ, ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಕೇಂದ್ರ ಸಿಇಓಗೆ ಮಾಹಿತಿ ನೀಡಲಾಗಿದೆ. ವಿಷಕಾರಿ ಆಹಾರ ಮಾರಾಟ ಮಾಡುವುದನ್ನು ತಡೆಯಲು ಕೇಂದ್ರ ಆಹಾರ ಇಲಾಖೆಯ ಜವಾಬ್ದಾರಿ ಕೂಡ ಇದೆ. ಬೇಜವಾಬ್ದಾರಿ ವರ್ತನೆ ತೋರುವ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ಕೊಡುವುದಾಗಿ ಸಿಇಒ ತಿಳಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಇ ಕಾಮರ್ಸ್ ಪ್ಲಾಟ್ ಫಾರಂಗೆ ಅನುಮತಿ ನೀಡುವುದು ಕೇಂದ್ರ ಸರ್ಕಾರ. ಹೀಗಾಗಿ ಕೇಂದ್ರದ ಸಹಕಾರ ಬೇಕು. 2100 ದತ್ತೂರ ಸೀಜ್ ಆಗಿದೆ. 24 ಗಂಟೆಯಲ್ಲಿ ಯಾವುದೇ ಸ್ಥಳೀಯ ಕೇಂದ್ರ ಅಧಿಕಾರಿ ಸ್ಪಂದನೆ ಕೊಡದೇ ಇದ್ದಾಗ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಆಹಾರ ಪರವಾನಿಗೆ ರದ್ದಿಗೆ ಈಗ ಕೇಂದ್ರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.





















