SK Home Ad
Home ಸಿನಿ ಮಿಲ್ಸ್ ವಿಶ್ವದಾದ್ಯಂತ ‘ಟಾಕ್ಸಿಕ್’ ಅಬ್ಬರ: ಯಶ್ ಅಭಿಮಾನಿಗಳಿಂದ ಭರ್ಜರಿ ಸೆಲೆಬ್ರೇಷನ್!

ವಿಶ್ವದಾದ್ಯಂತ ‘ಟಾಕ್ಸಿಕ್’ ಅಬ್ಬರ: ಯಶ್ ಅಭಿಮಾನಿಗಳಿಂದ ಭರ್ಜರಿ ಸೆಲೆಬ್ರೇಷನ್!

0
68

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್‌ ಇಂದು ಪ್ರಪಂಚದಾದ್ಯಂತ ತೆರೆಕಂಡಿದ್ದು, ರಾಜ್ಯದಾದ್ಯಂತ ಅಭಿಮಾನಿಗಳ ಸಂಭ್ರಮ ಜೋರಾಗಿದೆ.

ದೇಶದಲ್ಲಿ ನಿರ್ಮಾಣಗೊಂಡ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿದ್ದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗೋನ್ ಅಪ್ಸ್’ ಸಿನಿಮಾ ಬಿಡುಗಡೆಗಾಗಿ ಕಾಯ್ದು ಕುಳಿತಿದ್ದ ಲಕ್ಷಾಂತರ ಯಶ್‌ ಅಭಿಮಾನಿಗಳಿಗೆ ಕೊನೆಗೂ ಇಂದು ʻರಾಯ್‌ʼ ದರ್ಶನವಾಗಿದೆ.

ಯಶ್ ಅವರು ರಾಯ ಮತ್ತು ಟಿಕೆಟ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಕರ್ನಾಟಕವೊಂದರಲ್ಲೇ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ತಲುಪಿದೆ.

ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಅಭಿಮಾನಿಗಳು ಥಿಯೇಟರ್‌ಗಳತ್ತ ದೌಡಾಯಿಸಿದ್ದು, ಹಲವು ಕಡೆಗಳಲ್ಲಿ ಹಬ್ಬದ ವಾತಾವರಣವನ್ನೇ ಅಭಿಮಾನಿಗಳು ನಿರ್ಮಾಣ ಮಾಡಿದ್ದಾರೆ.

ಚಿತ್ರದ ನಾಯಕಿಯಾಗಿ ‘ಲೇಡಿ ಸೂಪರ್‌ಸ್ಟಾರ್’ ನಯನತಾರಾ ನಟಿಸಿದ್ದು, ಕಿಯಾರಾ ಅಡ್ವಾಣಿ, ರುಕ್ಕಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಸೇರಿದಂತೆ ಬಹುಭಾಷಾ ತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕಿ ಗೀತು ಮೋಹನ್ ದಾಸ್ ಸಾರಥ್ಯದಲ್ಲಿ ರೂಪುಗೊಂಡಿರುವ ‘ಟಾಕ್ಸಿಕ್’ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧಗೊಂಡಿದೆ. ಸಿನಿಮಾ ತೆರೆಕಾಣುವ ಮುನ್ನವೇ ಭಾರೀ ನಿರೀಕ್ಷೆ ಮೂಡಿಸಿದ್ದ ಚಿತ್ರವನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಲು ಯಶ್ ಅಭಿಮಾನಿಗಳು ಬೆಳಗ್ಗಿನಿಂದಲೇ ಚಿತ್ರಮಂದಿರಗಳ ಮುಂದೆ ಜಮಾಯಿಸಿದ್ದಾರೆ.

ಇನ್ನು ಥಿಯೇಟರ್‌ಗಳ ಬಳಿ ಅಭಿಮಾನಿಗಳ ಸಂಭ್ರಮವೂ ಮುಗಿಲುಮುಟ್ಟಿದೆ. ವಿವಿಧ ಕಲಾ ತಂಡಗಳ ಪ್ರದರ್ಶನ, ಡೊಳ್ಳು-ವಾದ್ಯಗಳೊಂದಿಗೆ ಅದ್ದೂರಿ ಸ್ವಾಗತ, ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ‘ಟಾಕ್ಸಿಕ್’ ಬಿಡುಗಡೆಗೆ ಅಭಿಮಾನಿಗಳು ಹಬ್ಬದ ಮೆರುಗು ನೀಡಿದ್ದಾರೆ.