‘ಕೌಂತೇಯ’ ಟೀಸರ್ ಬಿಡುಗಡೆ: ಖಡಕ್ ಪೊಲೀಸ್ ಅಧಿಕಾರಿಯಾಗಿ ಅಚ್ಯುತ್ ಕುಮಾರ್, ವಿಲನ್ ಶೇಡ್‌ನಲ್ಲಿ ಮನೋರಂಜನ್ ರವಿಚಂದ್ರನ್
ಬೆಂಗಳೂರು: ಅಚ್ಯುತ್ ಕುಮಾರ್ ಹಾಗೂ ಮನೋರಂಜನ್ ರವಿಚಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಕೌಂತೇಯ’ (Kounteya) ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಶ್ರೀ ಮಾಂಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಸಸ್ಪೆನ್ಸ್ ಹಾಗೂ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು, ಮರ್ಡರ್ ಮಿಸ್ಟ್ರಿಯ ಸುತ್ತ ಕಥೆ ಸಾಗಲಿದೆ.
ಚಿತ್ರದ ಟೀಸರ್‌ನಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್ ಅವರು ವಿಭಿನ್ನ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿವೃತ್ತಿಯ ಕೊನೆಯ ದಿನಗಳಲ್ಲಿರುವ ಸಬ್‌ಇನ್ಸ್‌ಪೆಕ್ಟರ್ ‘ರಂಗನಾಥ್’ ಅವರ ಕೈಗೆ ಒಂದು ವಿಚಿತ್ರ ಹಾಗೂ ರೋಚಕ ಕೊಲೆ ಪ್ರಕರಣ ಬರುತ್ತದೆ. ಆ ಪ್ರಕರಣದ ತನಿಖೆ ನಡೆಸುತ್ತಾ ರಂಗನಾಥ್ ಎದುರಿಸುವ ಸವಾಲುಗಳು ಮತ್ತು ಅದರ ಹಿಂದಿರುವ ನಿಗೂಢತೆಯೇ ಚಿತ್ರದ ಪ್ರಮುಖ ಕಥಾಹಂದರವಾಗಿರುವಂತೆ ಟೀಸರ್ ಸುಳಿವು ನೀಡಿದೆ.
ಇನ್ನು ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಮನೋರಂಜನ್ ರವಿಚಂದ್ರನ್ ಅವರ ಪಾತ್ರ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಇದೇ ಮೊದಲ ಬಾರಿಗೆ ವಿಭಿನ್ನ ಶೇಡ್‌ನ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಅವರ ಪಾತ್ರದ ಲುಕ್ ಹಾಗೂ ನಟನೆ ಗಮನ ಸೆಳೆಯುತ್ತಿದ್ದು, ‘ಕೌಂತೇಯ’ ಮೂಲಕ ತಮ್ಮ ಸಿನಿ ಪಯಣದಲ್ಲಿ ಹೊಸ ರೀತಿಯ ಪಾತ್ರದೊಂದಿಗೆ ದಂಡಯಾತ್ರೆ ಮಾಡಿದ್ದಾರೆ.
ಮನೋರಂಜನ್ ರವಿಚಂದ್ರನ್‌ಗೆ ಜೋಡಿಯಾಗಿ ಅನನ್ಯ ರಾಜೇಶ್ ನಟಿಸಿದ್ದಾರೆ. ಮತ್ತೊಂದೆಡೆ ಪ್ರಿಯಾಂಕಾ ತಿಮ್ಮೇಶ್ ಎಸಿಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಖಾಕಿ ತೊಟ್ಟು ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಶರಣ್ಯ ಶೆಟ್ಟಿ ಚಿತ್ರದ ನಾಯಕಿಯಾಗಿ ನಟಿಸಿದ್ದು, ಅಚ್ಯುತ್ ಕುಮಾರ್ ನಿರ್ವಹಿಸಿರುವ ರಂಗನಾಥ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಸ್ಪೆನ್ಸ್, ತನಿಖೆ, ಕೊಲೆ ಪ್ರಕರಣ ಹಾಗೂ ಪಾತ್ರಗಳ ನಡುವಿನ ನಿಗೂಢ ಸಂಬಂಧಗಳನ್ನು ಕೇಂದ್ರವಾಗಿಟ್ಟುಕೊಂಡಿರುವ ‘ಕೌಂತೇಯ’ ಸಿನಿಮಾ ಪ್ರೇಕ್ಷಕರಿಗೆ ವಿಭಿನ್ನ ಕ್ರೈಮ್ ಥ್ರಿಲ್ಲರ್ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ. ವಿಶೇಷವಾಗಿ ನಿವೃತ್ತಿಯ ಹಂತದಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರ ಕೈಗೆ ಬರುವ ಕೊಲೆ ಪ್ರಕರಣದ ತನಿಖೆ ಯಾವ ತಿರುವು ಪಡೆಯುತ್ತದೆ ಎಂಬುದೇ ಚಿತ್ರದ ಪ್ರಮುಖ ಕುತೂಹಲವಾಗಿದೆ.
ಶ್ರೀ ಮಾಂಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸುರೇಶ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಿ.ಕೆ. ಚಂದ್ರಹಾಸ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚಿತ್ರಕಥೆ ಬರವಣಿಗೆಯಲ್ಲಿ ಅವರಿಗೆ ಸಾಥ್ ನೀಡಿರುವ ಹರಿ ಸಂಭಾಷಣೆಗೂ ಪೆನ್ನು ಹಿಡಿದಿದ್ದಾರೆ. ಪಿ.ಎಲ್. ರವಿ ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಒಟ್ಟಿನಲ್ಲಿ, ಪೊಲೀಸ್ ತನಿಖೆ, ಮರ್ಡರ್ ಮಿಸ್ಟ್ರಿ ಹಾಗೂ ನಿಗೂಢ ಪಾತ್ರಗಳ ಸುತ್ತ ಹೆಣೆದಿರುವ ‘ಕೌಂತೇಯ’ ಟೀಸರ್ ಸಿನಿಮಾ ಕುರಿತು ನಿರೀಕ್ಷೆ ಹೆಚ್ಚಿಸಿದೆ. ಅಚ್ಯುತ್ ಕುಮಾರ್ ಅವರ ಪೊಲೀಸ್ ಪಾತ್ರದ ಗಂಭೀರತೆ ಹಾಗೂ ಮನೋರಂಜನ್ ರವಿಚಂದ್ರನ್ ಅವರ ಹೊಸ ವಿಲನ್ ಶೇಡ್ ಚಿತ್ರದ ಪ್ರಮುಖ ಹೈಲೈಟ್‌ಗಳಾಗುವ ಸಾಧ್ಯತೆ ಇದೆ.
ಕೌಂತೇಯ ಚಿತ್ರದ ಟೀಸರ್ ವೀಕ್ಷಿಸಿ






















