ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ : ದಾಂಡೇಲಿ ನಗರದ ಅಂಬೇವಾಡಿ,ಐ.ಪಿ.ಎಂ. ಏರಿಯಾ, ಟಿ.ಆರ್.ಟಿ., ಹಸನಮಾಳ, ಸಕ್ಕಲಗಾ ಹಾಗೂ ಬೇಡರ ಶಿರಗೂರು ಸುತ್ತಮುತ್ತಲಿನ ಅರಣ್ಯ ಮತ್ತು ಜನವಸತಿ ಪ್ರದೇಶಗಳಲ್ಲಿ ಕಪ್ಪು ಚಿರತೆ ಹಾಗೂ ಚುಕ್ಕೆಚಿರತೆಗಳ ಸಂಚಾರ ಹೆಚ್ಚಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಹಸನಮಾಳದ ಹೋಂಸ್ಟೇ ಒಂದಕ್ಕೆ ಕಪ್ಪು ಚಿರತೆ ನುಗ್ಗಿ ನಾಯಿಯೊಂದನ್ನು ಕೊಂದು ಹಾಕಿರುವ ಘಟನೆ ನಡೆದಿದೆ. ಬಳಿಕ ಇದೇ ಕಪ್ಪು ಚಿರತೆ ಟಿ.ಆರ್.ಟಿ. ಕಾಲೋನಿ ಸಮೀಪದಲ್ಲೂ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇತ್ತ ಅಂಬೇವಾಡಿಯ ವಿ.ಟಿ.ಯು. ಕ್ಯಾಂಪಸ್‌ನಲ್ಲಿ ರಾತ್ರಿ ವೇಳೆ ಚುಕ್ಕೆಚಿರತೆ ಸಂಚರಿಸುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದವರ ಕಣ್ಣಿಗೂ ಚಿರತೆಗಳು ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಚಿರತೆಗಳು ಇದುವರೆಗೆ ಮನುಷ್ಯರ ಮೇಲೆ ದಾಳಿ ನಡೆಸಿದ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೆ ನಾಯಿ ಹಾಗೂ ದನಕರುಗಳ ಮೇಲೆ ದಾಳಿ ನಡೆಸಿರುವ ಘಟನೆಗಳು ಕೇಳಿಬಂದಿದ್ದು, ಆಹಾರ ಅರಸಿ ಚಿರತೆಗಳು ಜನವಸತಿ ಪ್ರದೇಶಗಳತ್ತ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಪ್ಪು ಚಿರತೆ ದಾಂಡೇಲಿಯ ಅಪರೂಪದ ವನ್ಯಜೀವಿ : ಕಪ್ಪು ಚಿರತೆ ಪ್ರತ್ಯೇಕ ಜಾತಿಯಲ್ಲ. ಸಾಮಾನ್ಯ ಚಿರತೆಯಲ್ಲಿನ ಅಪರೂಪದ ಮೆಲಾನಿಸಂ ಎಂಬ ಆನುವಂಶಿಕ ಗುಣಲಕ್ಷಣದಿಂದ ಅದರ ಮೈಬಣ್ಣ ಕಪ್ಪಾಗಿ ಕಾಣಿಸುತ್ತದೆ. ಬೆಳಕಿನ ಪ್ರಭಾವದಲ್ಲಿ ದೇಹದ ಮೇಲಿರುವ ಚುಕ್ಕೆಗಳು ಗೋಚರಿಸುತ್ತವೆ. ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಕಪ್ಪು ಚಿರತೆಗಳು ಕಾಣಿಸಿಕೊಳ್ಳುವುದು ಇಲ್ಲಿನ ಜೀವವೈವಿಧ್ಯದ ವಿಶೇಷತೆಯಾಗಿದೆ.
ಕಪ್ಪು ಚಿರತೆಯನ್ನು ವೀಕ್ಷಿಸಲು ವನ್ಯಜೀವಿ ಪ್ರಿಯರು ಹಾಗೂ ಪ್ರವಾಸಿಗರು ದಾಂಡೇಲಿಗೆ ಆಗಮಿಸುತ್ತಾರೆ. ಹೀಗಾಗಿ ಇಂತಹ ಅಪರೂಪದ ವನ್ಯಜೀವಿಗಳ ಸಂರಕ್ಷಣೆಯ ಜತೆಗೆ ಅವುಗಳಿಂದ ಜನವಸತಿ ಪ್ರದೇಶಗಳಲ್ಲಿ ಉಂಟಾಗಬಹುದಾದ ಅಪಾಯವನ್ನು ನಿಯಂತ್ರಿಸುವುದು ಅರಣ್ಯ ಇಲಾಖೆಯ ಮುಂದಿರುವ ಪ್ರಮುಖ ಸವಾಲಾಗಿದೆ.
- ಏಷ್ಯನ್ ಗೇಮ್ಸ್ – 2026: ಕರ್ನಾಟಕದ ಕ್ರೀಡಾ ಸಾಧಕರಿಗೆ ಸರ್ಕಾರದ ಮಹತ್ವದ ಕೊಡುಗೆ
- KPPL ಮೊದಲ ಆವೃತ್ತಿಗೆ ಕೌಂಟ್ಡೌನ್: 7 ತಂಡಗಳ ಜೆರ್ಸಿ ಬಿಡುಗಡೆ
- ಯುವತಿ ಆತ್ಮಹತ್ಯೆ ಪ್ರಕರಣ: ಪತಿ ಸೇರಿ 8 ಮಂದಿಯ ವಿರುದ್ಧ ಪ್ರಕರಣ
- ಇಂದು ಭೂಮಿಯ ಇತಿಹಾಸ ಸಾರುವ, ನಿಸರ್ಗದ ಮೌಲ್ಯ ತಿಳಿಯುವ ‘ಭೂವೈವಿಧ್ಯ ದಿನ’
- 6 ಕ್ಷೇತ್ರಗಳಿಗೆ ಇಂದು ಉಪಚುನಾವಣೆ: 5 ವಿಧಾನಸಭೆ, 1 ಲೋಕಸಭಾ ಸ್ಥಾನಕ್ಕೆ ಮತದಾನ






















