SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಪತಿ ಕೊಲೆ ಮಾಡಿ ನದಿಗೆ ಎಸೆದ ಆರೋಪ: ಪತ್ನಿ ಸೇರಿ ಇಬ್ಬರ ಬಂಧನ

ಪತಿ ಕೊಲೆ ಮಾಡಿ ನದಿಗೆ ಎಸೆದ ಆರೋಪ: ಪತ್ನಿ ಸೇರಿ ಇಬ್ಬರ ಬಂಧನ

0
15

ದಾವಣಗೆರೆ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ, ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿರುವ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಶ್ರುತಿ ಹಾಗೂ ಆಕೆಯ ಪ್ರಿಯಕರ, ನಿಟುವಳ್ಳಿಯ ನಿವಾಸಿ ಉಬೇದುಲ್ಲಾ ಅಲಿಯಾಸ್ ಮುನ್ನಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಪಾಮೇನಹಳ್ಳಿ ಗ್ರಾಮದ ರಘು ಎಂ. (36) ಕೊಲೆಯಾದ ಪತಿ. ರಘು ಹಾಗೂ ಶ್ರುತಿಗೆ 12 ವರ್ಷಗಳ ಹಿಂದೆ ವಿವಾಹವಾಗಿತ್ತು. ರಘು ಮದ್ಯಪಾನ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದಂಪತಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಶ್ರುತಿ ಕಳೆದ 2-3 ವರ್ಷಗಳಿಂದ ಉಬೇದುಲ್ಲಾ ಜತೆ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪತಿಯ ಕಾಟದಿಂದ ಮುಕ್ತಿ ಪಡೆದು ಪ್ರಿಯಕರನೊಂದಿಗೆ ಜೀವನ ನಡೆಸಲು ಶ್ರುತಿ ಸಂಚು ರೂಪಿಸಿದ್ದಳು ಎನ್ನಲಾಗಿದೆ. ಯೋಜನೆಯಂತೆ ಉಬೇದುಲ್ಲಾ ತನ್ನ ಸ್ನೇಹಿತ ಸುರೇಶನ ಮೂಲಕ ರಘುವನ್ನು ಕರೆಸಿಕೊಂಡಿದ್ದ. ಬಳಿಕ ರಘುವಿಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ರಘುವಿನ ಮೃತದೇಹವನ್ನು ಹರಿಹರ ಸಮೀಪದ ತುಂಗಭದ್ರಾ ನದಿಗೆ ಎಸೆಯಲಾಗಿದೆ ಎನ್ನಲಾಗಿದೆ. ನಂತರ ಶ್ರುತಿ ಪತಿ ಕಾಣೆಯಾಗಿರುವುದಾಗಿ ಪೊಲೀಸರ ಮುಂದೆ ನಾಟಕವಾಡಿದ್ದಳು ಎಂದು ತಿಳಿದುಬಂದಿದೆ. ಶ್ರುತಿಯ ನಡೆ ಬಗ್ಗೆ ಅನುಮಾನಗೊಂಡ ಪೊಲೀಸರು ಆಕೆಯ ಸಹೋದರಿಯನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣದ ಅಸಲಿ ಸಂಗತಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಬಳಿಕ ಶ್ರುತಿ ಹಾಗೂ ಉಬೇದುಲ್ಲಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಇದೀಗ ತುಂಗಭದ್ರಾ ನದಿಯಲ್ಲಿ ರಘುವಿನ ಮೃತದೇಹಕ್ಕಾಗಿ ಮೀನುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಶೋಧ ಕಾರ್ಯ ನಡೆಯುತ್ತಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.