SK Home Ad
Home ಸುದ್ದಿ ರಾಜ್ಯ SIT ತಾವೇ ರಚಿಸಿ, ತಾವೇ ‘ಕ್ಲೀನ್ ಚಿಟ್’ ನೀಡಿದರೆ ಒಪ್ಪಲು ಸಾಧ್ಯವೇ?

SIT ತಾವೇ ರಚಿಸಿ, ತಾವೇ ‘ಕ್ಲೀನ್ ಚಿಟ್’ ನೀಡಿದರೆ ಒಪ್ಪಲು ಸಾಧ್ಯವೇ?

0
65
ನಾಗೇಂದ್ರ ಸಚಿವ ಸ್ಥಾನದಿಂದ ವಜಾ ಮಾಡಿ: ಸರ್ಕಾರಕ್ಕೆ ಆರ್. ಅಶೋಕ್ ಖಡಕ್ ಆಗ್ರಹ

ನಾಗೇಂದ್ರ ಮರುಸೇರ್ಪಡೆಗೆ ಆಕ್ಷೇಪ; ‘ಮೊದಲು ನ್ಯಾಯಾಲಯದಲ್ಲಿ ನಿರಪರಾಧಿ ಎಂದು ಸಾಬೀತಾಗಲಿ’ ಎಂದ ಅಶೋಕ್

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ವಿರೋಧಿಸಿದ್ದು, ನಾಗೇಂದ್ರ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೋಂಡಿರುವ ಆರ್. ಅಶೋಕ್ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ನಾಗೇಂದ್ರ ಅವರು 2024ರ ಜೂನ್‌ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ತನಿಖಾ ಸಂಸ್ಥೆಗಳ ವಿಚಾರಣೆಯೂ ನಡೆದಿತ್ತು.

ಇದೀಗ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದನ್ನು ಪ್ರಶ್ನಿಸಿರುವ ಆರ್. ಅಶೋಕ್, “SIT ತಾವೇ ರಚಿಸಿ, ತಾವೇ ಕ್ಲೀನ್‌ಚಿಟ್ ನೀಡಿದರೆ ಅದನ್ನು ಹೇಗೆ ಒಪ್ಪಲು ಸಾಧ್ಯ?” ಎಂದು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ED ಮತ್ತು ಆದಾಯ ತೆರಿಗೆ ಇಲಾಖೆಯ ತನಿಖೆಗಳಿಂದಲೂ ಅಂತಿಮವಾಗಿ ಕ್ಲೀನ್‌ಚಿಟ್ ದೊರೆತಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಕರಣ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿರುವುದು ಸರಿಯಲ್ಲ ಎಂಬುದು ಪ್ರತಿಪಕ್ಷದ ಪ್ರಮುಖ ಆಕ್ಷೇಪವಾಗಿದೆ. ನ್ಯಾಯಾಲಯದಲ್ಲಿ ನಾಗೇಂದ್ರ ಅವರು ನಿರಪರಾಧಿ ಎಂದು ಸಾಬೀತಾದ ಬಳಿಕ ಸಚಿವರಾಗುವುದಕ್ಕೆ ತಮ್ಮ ವಿರೋಧವಿಲ್ಲ ಎಂದು ಅಶೋಕ್ ಹೇಳಿದ್ದಾರೆ.

ಈ ನಡುವೆ ನಾಗೇಂದ್ರ ಅವರ ಮರುಸೇರ್ಪಡೆ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆಗಸ್ಟ್ 18ರಂದು ವಿಧಾನಸಭೆಯ ಕಲಾಪವೂ ಈ ವಿಚಾರವಾಗಿ ಎರಡು ಬಾರಿ ಮುಂದೂಡಿಕೆಯಾಗಿತ್ತು.

ಆಗಸ್ಟ್ 19ರಂದು ಕೂಡ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಾಗೇಂದ್ರ ಅವರ ವಜಾಕ್ಕೆ ಆಗ್ರಹಿಸಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿರುವ ಅಶೋಕ್, ಜನರ ಹಣದ ಲೂಟಿಗೆ ಯಾವುದೇ ರೀತಿಯ ರಕ್ಷಣೆ ನೀಡಬಾರದು ಎಂದು ಹೇಳಿದ್ದಾರೆ. ಪ್ರಕರಣದ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳುವವರೆಗೆ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ತಮ್ಮ ಪಕ್ಷ ಒಪ್ಪುವುದಿಲ್ಲ ಎಂಬ ನಿಲುವನ್ನು ಅವರು ಸ್ಪಷ್ಟಪಡಿಸಿದ್ದಾರೆ.

ವಾಲ್ಮೀಕಿ ನಿಗಮದ ಹಣದ ಅಕ್ರಮ ಪ್ರಕರಣ ಈಗ ಮತ್ತೆ ರಾಜ್ಯ ರಾಜಕೀಯದ ಪ್ರಮುಖ ವಿಚಾರವಾಗಿದ್ದು, ನಾಗೇಂದ್ರ ಅವರ ಸಚಿವ ಸಂಪುಟಕ್ಕೆ ಮರುಸೇರ್ಪಡೆ ಸರ್ಕಾರ ಮತ್ತು ಪ್ರತಿಪಕ್ಷದ ನಡುವೆ ಮತ್ತಷ್ಟು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.