SK Home Ad
Home ಸುದ್ದಿ ರಾಜ್ಯ SIR ವಿವಾದ: ‘ನಾಗರಿಕನಾಗಿ ನನಗೂ ಸಮಾನ ಹಕ್ಕಿದೆ’ – ಪ್ರಕಾಶ್ ರಾಜ್

SIR ವಿವಾದ: ‘ನಾಗರಿಕನಾಗಿ ನನಗೂ ಸಮಾನ ಹಕ್ಕಿದೆ’ – ಪ್ರಕಾಶ್ ರಾಜ್

0
126

ನಾನು ಸೆಲೆಬ್ರಿಟಿಯಾಗಿರಬಹುದು, ಪ್ರತಿಯೊಬ್ಬ ಸಾಮಾನ್ಯ ನಾಗರಿಕನಂತೆ ನನಗೂ ಸಮಾನ ಹಕ್ಕುಗಳಿವೆ – ‘ನನ್ನ ಹೋರಾಟ ವೈಯಕ್ತಿಕವಲ್ಲ, ಪ್ರತಿಯೊಬ್ಬ ನಾಗರಿಕನ ಹಕ್ಕಿಗಾಗಿ’: ಪ್ರಕಾಶ್ ರಾಜ್

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟಿರುವ ವಿಚಾರವಾಗಿ ನಟ ಪ್ರಕಾಶ್ ರಾಜ್ ಚುನಾವಣಾ ಆಯೋಗದ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಎರಡನೇ ವಿಡಿಯೋ ಹಂಚಿಕೊಂಡು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಇನ್ನು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಪೋಸ್ಟ್‌ ಮಾಡಿ ತಮ್ಮ ವೋಟರ್ ಐಡಿ ‘ಖಾಯಂ ಆಗಿ ವರ್ಗಾವಣೆಯಾಗಿದೆ’ ಎಂದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ತೋರಿಸಲಾಗಿತ್ತು. ಹೀಗಾಗಿ ಫಾರ್ಮ್-6 ಭರ್ತಿ ಮಾಡಿ ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿತ್ತು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿದ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ಕರೆ ಮಾಡಿ ಮಾಹಿತಿ ತಪ್ಪಾಗಿದೆ, ಸರಿಪಡಿಸುವುದಾಗಿ ತಿಳಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.

ಆದರೆ ಅದೇ ದಿನ ಸಂಜೆ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಹೆಸರು ‘ಡಿಲೀಟ್ ಆಗಿಲ್ಲ, ವರ್ಗಾವಣೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದು ಏಕೆ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ. ಬಳಿಕ ರಾತ್ರಿ ತಮ್ಮ ಹಳೆಯ ವಿಳಾಸಕ್ಕೆ ಬಿಎಲ್‌ಒ ಸಿಬ್ಬಂದಿಯನ್ನು ಕಳುಹಿಸಿ ನೆರೆಹೊರೆಯವರಿಂದ ಮಾಹಿತಿ ಪಡೆದು ಮಹಜರು ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಬೆಳವಣಿಗೆಗಳನ್ನು ತಮ್ಮ ವಿರುದ್ಧದ ಪ್ರತಿಕ್ರಿಯೆಯಾಗಿ ಬಳಸಿಕೊಂಡು ಕೆಲವು ಮಾಧ್ಯಮಗಳು ಮತ್ತು ಬಿಜೆಪಿ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ತಮ್ಮ ಹೇಳಿಕೆ ತಪ್ಪು ಎಂಬಂತೆ ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದ್ದಾರೆ.

“ನಾನು ನಟ ಅಥವಾ ಸೆಲೆಬ್ರಿಟಿಯಾಗಿರಬಹುದು. ಆದರೆ ನಾಗರಿಕನಾಗಿ ಪ್ರತಿಯೊಬ್ಬ ಸಾಮಾನ್ಯ ನಾಗರಿಕನಂತೆ ನನಗೂ ಸಮಾನ ಹಕ್ಕುಗಳಿವೆ. ನನ್ನ ಹೋರಾಟ ವೈಯಕ್ತಿಕ ವಿಚಾರವಲ್ಲ, ಪ್ರತಿಯೊಬ್ಬ ನಾಗರಿಕನ ಆತ್ಮಗೌರವ ಮತ್ತು ಮತದಾನದ ಹಕ್ಕಿನ ಹೋರಾಟ” ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ರಾಜ್ ಅವರ ಈ ಆರೋಪಗಳಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳಿಂದ ಅಧಿಕೃತವಾಗಿ ನೀಡಲಾಗಿರುವ ದಾಖಲೆಗಳು ಅಥವಾ ಸ್ಪಷ್ಟನೆಗಳ ಆಧಾರದ ಮೇಲೆ ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.