SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಶ್ರೀಗಳ ವಿರುದ್ಧ ವಾಗ್ದಾಳಿ ಮುಂದವರಿಸಿದ ಕಾಶಪ್ಪನವರ

ಶ್ರೀಗಳ ವಿರುದ್ಧ ವಾಗ್ದಾಳಿ ಮುಂದವರಿಸಿದ ಕಾಶಪ್ಪನವರ

0
100

ಬಾಗಲಕೋಟೆ: ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀ ವಿರುದ್ಧ ಎರಡನೇ ದಿನವೂ ಸಚಿವ ವಿಜಯಾನಂದ ಕಾಶಪ್ಪನವರ ತಮ್ಮ ವಾಗ್ದಾಳಿ ಮುಂದವರಿಸಿದ್ದಾರೆ. ಅತ್ತ ಶ್ರೀಗಳು ಕೂಡ ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಅಧಿಕಾರ ಶಶ್ವಾತವಲ್ಲ ಎಂದು ಪರೋಕ್ಷ ಟಾಂಗ್ ನೀಡಿರುವ ಪೋಸ್ಟ್ ಹಾಕಿದ್ದಾರೆ.

ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಕಾಶಪ್ಪನವರ, ನಾನು ಅವನಿಂದ ಕಲಿಯಬೇಕಿರೋದು ಏನೂ ಇಲ್ಲ, ಚಿಕ್ಕ ಮಕ್ಕಳಿಂದ ಪೋಸ್ಟ್ ಮಾಡುವ ಆ ಸ್ವಾಮೀಜಿಗೆ ವಯಸ್ಸು ಎಷ್ಟು ಇದೆ ಅಂತ ಮೊದಲು ಕೇಳಿ, ಅವನ ವಯಸ್ಸು ಎಷ್ಟಿದೆ, ಪ್ರಬುದ್ಧತೆ ಎಷ್ಟಿದೆ ತಿಳಿಯಲಿ. ಮೊದಲು ಸ್ವಾಮೀಜಿ ಈ ಚಿಲ್ಲರೆ ಬುದ್ಧಿ ಬಿಡಬೇಕು. ಗುರು ಆದವನು ಚಿಲ್ಲರೆ ಇರಬಾರದು. ಗುರುವಾದವನು ಭಕ್ತರನ್ನು ಸಮಾನವಾಗಿ ಕಾಣುವಂತಿರಬೇಕು. ಮೊದಲು ಭಕ್ತರನ್ನು ಚೆನ್ನಾಗಿ ಕಾಣಲು ಹೇಳಿ. ನಾವೇ ಅವರನ್ನು ಪೀಠಕ್ಕೆ ಕೂರಿಸಿದ್ದು, ಅದನ್ನು ಆ ಮನುಷ್ಯ ಉಳಿಸಿಕೊಂಡಿಲ್ಲ. ವಿಜಯಪುರದಲ್ಲಿ ಒಂದು ಕಂಪ್ಲೇಟ್ ಬಾಕಿಯಿದೆ. ಅದೇನಾಗಿದೆ ಎಂದು ಜನರಿಗೆ ಮೊದಲು ಉತ್ತರ ಕೊಡಲು ಹೇಳಿ ಎಂದಿದ್ದಾರೆ.

ನಾನೇನು ಇವನು ಬಂದಮೇಲೆ ಅಧಿಕಾರಕ್ಕೆ ಬಂದಿಲ್ಲ. ಇವನಿಗಿನ್ನು 48 ವರ್ಷ. ನಾವು ಕಳೆದ 50 ವರ್ಷಗಳಿಂದ ರಾಜಕಾರಣದಲ್ಲಿದ್ದೇವೆ. ಈತನಿಂದ ಬುದ್ಧಿ ಹೇಳಿಸಿಕೊಳ್ಳುವ ಸ್ಥಿತಿ ನಮಗೆ ಬಂದಿಲ್ಲ ಎಂದಿದ್ದಾರೆ.

ಬಿಡದಿ ಹೋರಾಟದ ಕುರಿತಾಗಿ ಮಾತನಾಡಿದ ಅವರು, ಅದರ ಅಧಿಸೂಚನೆ ಹೊರಡಿಸಿದ್ದೇ ಕುಮಾರಸ್ವಾಮಿ ಅವರು. ಈಗ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿ ನಾಟಕವಾಡುತ್ತಿದ್ದಾರೆ. ರೈತರೇ ಒಪ್ಪಿದಮೇಲೆ ಇವರದೇನು ಎಂದು ಪ್ರಶ್ನಿಸಿದ್ದಾರೆ.

ಸಿಟ್ಟು ಕಡಿಮೆ ಮಾಡಿಕೊಂಡರೆ ಇವನೇ ಸಿಎಂ: ಜಿಲ್ಲೆಯ ಸಿದ್ಧನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ಅವರು ಸಚಿವ ವಿಜಯಾನಂದ ಕಾಶಪ್ಪನವರ ಅವರನ್ನು ಕೂರಿಸಿಕೊಂಡು ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಈತನಿಗೆ ಇಲ್ಲಿನ ಆರ್ಶೀವಾದದಿಂದ ಸಚಿವಗಿರಿ ಸಿಕ್ಕಿದೆ. ಸಿಟ್ಟು ಸ್ವಲ್ಪ ಕಡಿಮೆ ಮಾಡಿಕೊಂಡರೆ ಈತ ಮುಖ್ಯಮಂತ್ರಿ ಕೂಡ ಆಗುತ್ತಾನೆ. ನಮ್ಮ ಆಶೀರ್ವಾದ ಸದಾ ಇರುತ್ತದೆ. ಈಗಲೇ ಅನೇಕರು ಷಡ್ಯಂತ್ರ ಮಾಡಿದ್ದಾರೆ. ನೂರು ಜನ ವಿರುದ್ಧ ನಿಂತರೂ ಸಹನೆಯಿಂದ ಇರಬೇಕೆಂದು ಕಾಶಪ್ಪನವರ ಸಮ್ಮುಖದಲ್ಲೇ ಶ್ರೀಗಳು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.