ಗದಗ: ಸೇವಾ ಕ್ಷೇತ್ರ ಅತ್ಯಂತ ವಿಶಾಲ. ಅದಕ್ಕೆ ಮಿತಿ ಇಲ್ಲ, ಅದಕ್ಕಾಗಿ ಮಂತ್ರಿಸ್ಥಾನವೇ ಬೇಕೆಂದೇನೂ ಇಲ್ಲ. ಇತರೆಲ್ಲ ಅವಕಾಶ ಬಳಸಿಕೊಂಡು ದೇಶ ಹಾಗೂ ಸ್ವಾವಲಂಬಿ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸೋಣ ಎಂದು ಶಾಸಕ ಎಚ್.ಕೆ. ಪಾಟೀಲ ಕಾರ್ಯಕರ್ತರಿಗೆ ಹೇಳಿದರು.
ಸಂಪುಟ ವಿಸ್ತರಣೆ ನಂತರ ಮೊದಲ ಬಾರಿಗೆ ಗದಗ ನಗರಕ್ಕೆ ಆಗಮಿಸಿದ ಎಚ್.ಕೆ. ಪಾಟೀಲ ಅವರನ್ನು ಕಾರ್ಯಕರ್ತರು ಭಾವನಾತ್ಮಕವಾಗಿ ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ ಸಭೆಯಲ್ಲಿ ಮಾತನಾಡಿದ ಅವರು, ಈ ಸ್ವಾಗತ ನನಗೆ ನೈತಿಕ ಧೈರ್ಯ ಮತ್ತು ಸ್ಥೈರ್ಯ ತಂದುಕೊಟ್ಟಿದೆ ಎಂದು ಭಾವಪರವಶರಾಗಿ ಹೇಳಿದರು.
ರಾಜಕೀಯ ಕಾರ್ಯಕರ್ತರನ್ನು ಸೇವಾ ಕ್ಷೇತ್ರಕ್ಕೆ ತೊಡಗಿಸಿದ ಮೊದಲ ಕ್ಷೇತ್ರ ಗದಗ. ಸೇವೆ ಮೂಲಕ ಜನರನ್ನು ತಲುಪಿ 100 ದಿನದಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಲು ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಂಕಲ್ಪ ಮಾಡೋಣ. ನನ್ನ ಮೇಲೆ ಪ್ರೀತಿ ಅಭಿಮಾನ ಗೌರವ ಇಟ್ಟಿರುವ ತಾವು ನನ್ನ ಜೊತೆಗೂಡಿ ಸನ್ಮಾರ್ಗದಲ್ಲಿ ನಡೆಯೋಣ. ಯಾರೂ ಮನಸ್ಸಿಗೆ ಬೇಸರ ಮಾಡಿಕೊಳ್ಳದೆ, ಜನಸೇವೆಯಲ್ಲಿ ಕಾರ್ಯತತ್ಪರಾಗೋಣ ಎಂದರು.
ತಮ್ಮನ್ನು ಬೆಂಬಲಿಸಿ ಗದಗ-ಬೆಟಗೇರಿ ನಗರಸಭೆ ಸದಸ್ಯ ಸ್ಥಾನಕ್ಕೆ ನೀಡಿದ ರಾಜೀನಾಮೆ ಹಿಂಪಡೆದುಕೊಳ್ಳಲು ಮನವಿ ಮಾಡಿದರು. ವಿಧಾನಸಭಾ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರನ್ನು ಅಭಿನಂದಿಸಿದರು.
ಮಾಜಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಕಾರ್ಯಕರ್ತರು ಧೈರ್ಯಗೆಡದೆ ಹೆಚ್ಚು ಕೆಲಸ ಮಾಡಿ. ಕಾಂಗ್ರೆಸ್ಸಿನ ತತ್ವ ಸಿದ್ಧಾಂತಗಳ ಮೂಲಕ ಜನಸೇವೆಗೆ ಮುಂದಾಗಿ. ಓರ್ವ ನಾಯಕ ಹೇಗಿರಬೇಕು ಎಂಬುದನ್ನು ತೋರಿಸೋಣ ಎಂದು ಧೈರ್ಯ ತುಂಬಿದರು.





















