ಬೆಂಗಳೂರು: ಎಸ್ಐಆರ್ ವಿಚಾರದಲ್ಲಿ ಜಾಗೃತರಾಗಿರಿ. ನಿಮ್ಮ ದಾಖಲೆ ನೀಡಿ ಮತದಾನದ ಹಕ್ಕು ಉಳಿಸಿಕೊಳ್ಳಿ. ಮತದಾನದ ಹಕ್ಕು ಇಲ್ಲವಾದರೆ ಸರ್ಕಾರಿ ಸೌಲಭ್ಯ ಪಡೆಯುವುದು ಕಷ್ಟವಾಗಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನ ಕಾಟನ್ ಪೇಟೆಯಲ್ಲಿರುವ ಹಜರತ್ ತವಕ್ಕಲ್ ಮಸ್ತಾನ್ ದರ್ಗಾದಲ್ಲಿ ಮಂಗಳವಾರ ನಡೆದ ವಾರ್ಷಿಕ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಗಸ್ಟ್ 8ರ ಒಳಗೆ ಅರ್ಜಿ ನೀಡಿ. ಈಗಾಗಲೇ 1 ಕೋಟಿ ಜನರ ಮಾಹಿತಿ ಸರಿಯಾಗಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಕ್ಕು ಶಕ್ತಿಯಾಗಿದೆ. ಇದನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು.
400 ವರ್ಷಗಳ ಇತಿಹಾಸ ಇರುವ ಧರ್ಮ ಕ್ಷೇತ್ರ ಇದು. ಮಾನವ ಧರ್ಮ ಎಲ್ಲರೂ ಒಂದಾಗಲಿ ಎಂದು ನೀವು ನಾವು ಪ್ರಾರ್ಥನೆ ಮಾಡುತ್ತಿದ್ದೇವೆ. ಇಂದು ಉರುಸ್ ಕಾರ್ಯಕ್ರಮ ಇದೆ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೆ, ಕರ್ಮ ಹಲವಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು ಎಂದರು.
ಯಾವ ಧರ್ಮವೂ ದ್ವೇಷ ಮಾಡಲು ಹೇಳುವುದಿಲ್ಲ: “ನಾವು ಇಂತಹುದೆ ಜಾತಿ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ನಮ್ಮ ಜನ್ಮದ ನಂತರ ನಮ್ಮ ಹಿರಿಯರು ಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ನಮಗೆ ಧರ್ಮ ಯಾಕೆ ಬೇಕು? ಸಮಾಜದಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಬೇಕು. ಎಲ್ಲರೂ ತಮ್ಮ ಧರ್ಮದಲ್ಲಿ ಶಾಂತಿ ನೆಲೆಸಬೇಕು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತೇವೆ. ಯಾವ ಧರ್ಮವೂ ಬೇರೆಯವರನ್ನು ದ್ವೇಷ ಮಾಡು ಎಂದು ಹೇಳುವುದಿಲ್ಲ” ಎಂದರು.
“ಪೈಗಂಬರ್ ಅವರು ಮಾನವೀಯತೆ ದೊಡ್ಡ ಧರ್ಮ ಎಂದು ಹೇಳಿದ್ದಾರೆ. ನಾನು ಕೂಡ ನಮ್ಮ ಗುರುಗಳು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಹೇಳಿದ ಮಾತನ್ನು ಹೇಳುತ್ತಿರುತ್ತೇನೆ. ದಿನೇಶ್ ಗುಂಡೂರಾವ್ ಅವರು ಹಿರಿಯ ನಾಯಕರು, ನಮ್ಮ ಪಕ್ಷದ ಅಧ್ಯಕ್ಷರಾಗಿದ್ದವರು. ನಿಮ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬಂದು, ನಿಮ್ಮ ಮನ ಗೆದ್ದಿದ್ದಾರೆ. ನೀವು ಅವರನ್ನು ಕಾಪಾಡಿಕೊಳ್ಳಬೇಕು. ಅವರು ಕಡಿಮೆ ಅಂತರದಲ್ಲಿ ಗೆದ್ದಿದ್ದು, ಮುಂದೆ ಅವರನ್ನು ಬಹಳ ದೊಡ್ಡ ಅಂತರದಲ್ಲಿ ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.




















