ಮಂಡ್ಯ: ಮಂಡ್ಯ ತಾಲೂಕಿನ ಹಟ್ನ ಬೇವುಕಲ್ಲು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ದಂಪತಿ ಪುಟ್ಟಸ್ವಾಮಿ ಮತ್ತು ನಾಗಮ್ಮ ಅವರ ಮನೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಗ್ರಾಮಕ್ಕೆ ಆಗಮಿಸಿದ ಅವರು, ಮೃತ ಪುಟ್ಟಸ್ವಾಮಿ ಅವರ ವೃದ್ಧ ತಾಯಿ, ಪುತ್ರ ಸ್ವಾಮಿ ಹಾಗೂ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.
ಬೆಳೆ ಸಂಗ್ರಹಣೆಗಾಗಿ ಬ್ಯಾಂಕ್ ಹಾಗೂ ಖಾಸಗಿ ಮೂಲಗಳಿಂದ ಪುಟ್ಟಸ್ವಾಮಿ ಅವರು ಸಾಲ ಮಾಡಿದ್ದರು. ಸಾಲಗಾರರ ಒತ್ತಡ ಮತ್ತು ಈ ಬಾರಿ ಮಳೆ ಕೊರತೆಯಿಂದ ಉಂಟಾದ ಬೆಳೆ ನಷ್ಟದ ಹಿನ್ನೆಲೆಯಲ್ಲಿ ಮನನೊಂದಿದ್ದ ದಂಪತಿ ಗುರುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಕಾಲುವೆಗಳಿಗೆ ನೀರು ಬಿಡಿ: ರೆಡ್ಡಿ ನೇತೃತ್ವದಲ್ಲಿ BJP ಪ್ರತಿಭಟನೆ
ಹಾಸನದಿಂದ ನೇರವಾಗಿ ಗ್ರಾಮಕ್ಕೆ ಬಂದ ಕುಮಾರಸ್ವಾಮಿ ಅವರು, “ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ನಿಮ್ಮೊಂದಿಗೆ ನಾನಿದ್ದೇನೆ” ಎಂದು ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಅಲ್ಲದೆ, ಕುಟುಂಬಕ್ಕೆ ಅಗತ್ಯ ನೆರವು ಒದಗಿಸುವ ಕುರಿತು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರೊಂದಿಗೆ ಚರ್ಚಿಸಿದರು.
ದಂಪತಿಯ ಸಾವಿಗೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ಮೃತ ಪುಟ್ಟಸ್ವಾಮಿ ಅವರ ಪುತ್ರ ಸ್ವಾಮಿ ಅವರಿಂದ ಮಾಹಿತಿ ಪಡೆದ ಸಚಿವರು, ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳೊಂದಿಗೆ ಮಾತನಾಡಿ, ಕುಟುಂಬಕ್ಕೆ ಸರ್ಕಾರದಿಂದ ದೊರೆಯಬೇಕಾದ ಎಲ್ಲಾ ಪರಿಹಾರ ಮತ್ತು ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವಂತೆ ಸೂಚಿಸಿದರು.
ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಪುಟ್ಟಸ್ವಾಮಿ ಅವರ ಪುತ್ರನಿಗೆ ಸಲಹೆ ನೀಡಿದ ಕುಮಾರಸ್ವಾಮಿ, ಯಾವುದೇ ಸಮಸ್ಯೆ ಎದುರಾದರೂ ತಮ್ಮನ್ನು ಭೇಟಿ ಮಾಡುವಂತೆ ತಿಳಿಸಿದರು.
ಇದನ್ನೂ ಓದಿ: ಕಾವೇರಿ ಹೋರಾಟ ತೀವ್ರ: ಆಗಸ್ಟ್ 13ಕ್ಕೆ ಅಖಂಡ ಕರ್ನಾಟಕ ಬಂದ್!
ದಂಪತಿಗೆ ಸುಮಾರು ಐದು ಎಕರೆ ಜಮೀನು ಇದ್ದು, ವಿವಿಧ ಕಾರಣಗಳಿಗೆ ಸಾಲ ಮಾಡಿಕೊಂಡಿದ್ದರು. ಈ ಬಾರಿ ಮಳೆ ಕೊರತೆಯಿಂದ ಬೆಳೆ ಕೈಗೂಡದಿರುವುದು ಹಾಗೂ ಸಾಲಗಾರರ ಒತ್ತಡದಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ಸಚಿವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಹೋಗಬಾರದು. ಸಮಸ್ಯೆಗಳು ಎದುರಾದಾಗ ಧೈರ್ಯದಿಂದ ಎದುರಿಸಬೇಕು. ತಮ್ಮನ್ನು ನಂಬಿದ ಕುಟುಂಬ ಮತ್ತು ಸಮಾಜವಿದೆ ಎಂಬುದನ್ನು ಮರೆಯಬಾರದು ಎಂದು ಮನವಿ ಮಾಡಿದರು.






















