ಉಡುಪಿ: ಕುಂದಾಪುರದಲ್ಲಿ ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಬಹಿರಂಗವಾಗಿದ್ದು, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿವಾದವೇ ಕೊಲೆಗೆ ಪ್ರಮುಖ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪರಾರಿಯಾಗಿರುವ ಆರೋಪಿ ಡೆರಿಕ್ ಕ್ರಾಸ್ತಾನನ್ನು ಬಂಧಿಸಲು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸಿಗಡಿ (ಶ್ರಿಂಪ್) ವ್ಯಾಪಾರ ನಡೆಸುತ್ತಿದ್ದ ಐವನ್ ರಿಚರ್ಡ್ ಮಸ್ಕರೇನಸ್ ಅವರಿಗೆ ಗುರುವಾರ ರಾತ್ರಿ ಸುಮಾರು 11.45 ಗಂಟೆಗೆ ಡೆರಿಕ್ ಕ್ರಾಸ್ತಾ ದೂರವಾಣಿ ಕರೆ ಮಾಡಿದ್ದ. ಈ ವೇಳೆ ಸಿಗಡಿ ಕೃಷಿಗೆ ಸಂಬಂಧಿಸಿದ ಬಾಕಿ ಹಣದ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, “ಧೈರ್ಯ ಇದ್ದರೆ ಕುಂದಾಪುರಕ್ಕೆ ಒಬ್ಬರೇ ಬನ್ನಿ” ಎಂದು ಡೆರಿಕ್ ಸವಾಲು ಹಾಕಿದ್ದಾನೆ ಎನ್ನಲಾಗಿದೆ.
ಬಳಿಕ ರಾತ್ರಿ ಸುಮಾರು 1.30 ಗಂಟೆಗೆ ಡೆರಿಕ್ ತನ್ನ ಸ್ಥಳದ (ಲೊಕೇಶನ್) ಮಾಹಿತಿಯನ್ನು ಐವನ್ ಅವರಿಗೆ ಕಳುಹಿಸಿದ್ದ. ಅದರಂತೆ ಶುಕ್ರವಾರ ಬೆಳಗಿನ ಜಾವ ಸುಮಾರು 3.15 ಗಂಟೆಗೆ ಐವನ್ ಕುಂದಾಪುರದ ಹೋಲಿ ರೋಸಾರಿಯೊ ಚರ್ಚ್ ಎದುರಿನ ರಸ್ತೆಯಲ್ಲಿ ತಮ್ಮ ಕಾರನ್ನು ನಿಲ್ಲಿಸಿ ಡೆರಿಕ್ ಬರುವುದನ್ನು ಕಾಯುತ್ತಿದ್ದರು.
ಅದೇ ವೇಳೆ ಕಪ್ಪು-ಕೆಂಪು ಬಣ್ಣದ ಥಾರ್ ವಾಹನದಲ್ಲಿ ಅಲ್ಲಿಗೆ ಬಂದ ಡೆರಿಕ್, ಐವನ್ ಅವರ ಕಾರಿನ ಎದುರು ತನ್ನ ವಾಹನ ನಿಲ್ಲಿಸಿದ್ದಾನೆ. ಐವನ್ ಕಾರಿನಿಂದ ಕೆಳಗಿಳಿದ ತಕ್ಷಣ ಪಿಸ್ತೂಲ್‌ನಿಂದ ಅವರ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿನಿಂದ ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗೊಂಡ ಐವನ್ ರಸ್ತೆಯಲ್ಲೇ ಕುಸಿದುಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿ ಬಂಧನಕ್ಕೆ ಮೂರು ವಿಶೇಷ ತಂಡ : ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಡುಪಿ ಪೊಲೀಸರು ಪರಾರಿಯಾಗಿರುವ ಡೆರಿಕ್ ಕ್ರಾಸ್ತಾ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕರೆಗಳ ವಿವರಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ತನಿಖೆ ಮುಂದುವರಿದಿದೆ.
ರೌಡಿಶೀಟರ್ ಹಿನ್ನೆಲೆ : ಪೊಲೀಸರ ಮಾಹಿತಿ ಪ್ರಕಾರ, ಐವನ್ ರಿಚರ್ಡ್ ಮಸ್ಕರೇನಸ್, ‘ಮುನ್ನಾ’ ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದು. ಈ ಹಿಂದೆ ಉಡುಪಿ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಕುಕ್ಕಿಕಟ್ಟೆ ಪಿಟ್ಟಿ ನಾಗೇಶ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಪಿಟ್ಟಿ ನಾಗೇಶ ಅವರ ತಂಡ ಹಲವು ಬಾರಿ ಐವನ್ ಹತ್ಯೆಗೆ ಸಂಚು ರೂಪಿಸಿದ್ದ ಮಾಹಿತಿಯೂ ಪೊಲೀಸರಿಗೆ ಲಭ್ಯವಿತ್ತು. ಇದೀಗ ಐವನ್ ಗುಂಡಿನ ದಾಳಿಗೆ ಬಲಿಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಹಣಕಾಸಿನ ವ್ಯವಹಾರ, ವೈಯಕ್ತಿಕ ವೈಷಮ್ಯ ಹಾಗೂ ಇತರೆ ಸಂಭವನೀಯ ಕಾರಣಗಳ ಕುರಿತೂ ತನಿಖೆ ಮುಂದುವರಿಸಿದ್ದಾರೆ. ಆರೋಪಿ ಡೆರಿಕ್ ಕ್ರಾಸ್ತಾ ಬಂಧನದ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
- ಸಾಲದ ಸಂಕಷ್ಟಕ್ಕೆ ಬಲಿಯಾದ ರೈತ ದಂಪತಿ; ಮನೆಗೆ ಭೇಟಿ ನೀಡಿ ನೆರವಿನ ಭರವಸೆ ನೀಡಿದ ಕುಮಾರಸ್ವಾಮಿ
- ದಾಖಲೆ ಕಲೆಕ್ಷನ್ ಮೂಲಕ ‘ಸ್ಪೈಡರ್-ಮ್ಯಾನ್’ ವಿಶ್ವಾದ್ಯಂತ ಸದ್ದು
- 2027 ವಿಶ್ವಕಪ್ ಕ್ರಿಕೆಟ್ಗೆ ಆಫ್ರಿಕಾದ ಆತಿಥ್ಯ: 12 ಮೈದಾನಗಳ ಘೋಷಣೆ
- 19 ವರ್ಷ ಬಳಿಕ ಕೋಲ್ಕತ್ತಾಗೆ ಮರಳಿದ ಲೇಖಕಿ ತಸ್ಲಿಮಾ ನಸ್ರಿನ್!
- ಆಗಸ್ಟ್ 2ರ ಸರ್ವಪಕ್ಷ ಸಭೆಯಲ್ಲಿ ಕಾವೇರಿ ಕುರಿತು ಸ್ಪಷ್ಟ ನಿಲುವು






















