SK Home Ad
Home ನಮ್ಮ ಜಿಲ್ಲೆ ಮಂಡ್ಯ ಕಾವೇರಿ ವಿವಾದ: ʻಜನನಾಯಗನ್’ ಪೋಸ್ಟರ್ ಹರಿದು ಪ್ರತಿಭಟನೆ

ಕಾವೇರಿ ವಿವಾದ: ʻಜನನಾಯಗನ್’ ಪೋಸ್ಟರ್ ಹರಿದು ಪ್ರತಿಭಟನೆ

0
52

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಕರುನಾಡ ವಿಜಯ ಸೇನೆ ಕಾರ್ಯಕರ್ತರು ಗುರುವಾರ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿ, ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅಭಿನಯದ ʻಜನನಾಯಗನ್ʼ ಚಿತ್ರದ ಪೋಸ್ಟರ್ ಹರಿದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಗುರುಶ್ರೀ ಚಿತ್ರಮಂದಿರದ ಎದುರು ಕರುನಾಡ ವಿಜಯ ಸೇನೆ ರಾಜ್ಯಾಧ್ಯಕ್ಷ ದೀಪಕ್ ಅವರ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ತಮಿಳು ಚಿತ್ರಗಳನ್ನು ಪ್ರದರ್ಶಿಸುವುದನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರು ಚಿತ್ರಮಂದಿರದ ಮುಂದೆ ʻಜನನಾಯಗನ್ʼ ಚಿತ್ರದ ಪೋಸ್ಟರ್ ಹರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚಿತ್ರಮಂದಿರದ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ ವೇಳೆ, ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸುವುದಾಗಿ ಮಾಲೀಕರು ಭರವಸೆ ನೀಡಿದರು.

ಇದಾದ ನಂತರ ವಿಜಯಸೇನೆ ಕಾರ್ಯಕರ್ತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದು ಸ್ಥಳದಿಂದ ತೆರಳಿದರು. ಪ್ರತಿಭಟನೆ ವೇಳೆ ಕೆಲಕಾಲ ಚಿತ್ರಮಂದಿರದ ಸುತ್ತಮುತ್ತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.